ಸಾರಾಂಶ
ಹುಮನಾಬಾದ್‌ನ ವೀರಭದ್ರೇಶ್ವರ ಜಾತ್ರೆಯ ಆರಂಭೋತ್ಸವದ ಅಂಗವಾಗಿ ಮುತ್ತೈದೆಯರಿಂದ ದೇವರಿಗೆ ಎಣ್ಣೆ ಹಚ್ಚುವ ಮೂಲಕ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಐತಿಹಾಸಿಕ ಮತ್ತು ಪೌರಾಣಿಕ ಪ್ರಸಿದ್ಧವಾದ ವೀರಭದ್ರೇಶ್ವರ ಜಾತ್ರೆಯ ಆರಂಭೋತ್ಸವದ ಅಂಗವಾಗಿ ಪಟ್ಟಣದ ಮುತ್ತೈದೆಯರಿಂದ ದೇವರಿಗೆ ಎಣ್ಣೆ ಹಚ್ಚುವ ಮೂಲಕ ಜಾತ್ರಾ ಮೋಹತ್ಸವ ಪ್ರಾರಂಭಗೊಂಡಿತು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಮುತ್ತೈದೆಯರು ವೀರಭದ್ರೇಶ್ವರ ಸ್ವಾಮಿಗೆ ಮದುಮಗ ಜತೆಗೆ ಭದ್ರಕಾಳಿಯನ್ನು ಮದುಮಗಳನ್ನಾಗಿ ಮಾಡಿ, ಎಣ್ಣೆ ಹಚ್ಚುವ ಕಾರ್ಯಕ್ರಮದೊಂದಿಗೆ ಜಾತ್ರೆಯು ಆರಂಭಗೊಂಡಿತ್ತು.
ಇದಕ್ಕೂ ಮೊದಲು ದಿವಟಿಗೆ ಹಿಡಿದು ಬಾಜಾ ಭಜಂತ್ರಿಗಳೊಂದಿಗೆ ವೀರ ರೇಣುಕ ಗಂಗಾಧರ ಶಿವಾಚಾರ್ಯ ಅವರನ್ನು ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಶೇಟಗಾರ, ಶೇಟ್ಟಿ, ಮಠಪತಿ ಜತೆಗೆ ಆರತಿ ಹಿಡಿದುಕೊಂಡು ಬರುವ ಸಂಪ್ರದಾಯ ನಡೆಯಿತು.ಮಹೋತ್ಸವದಲ್ಲಿ ಒಂದು ಕಡೆ ವೀರಭದ್ರೇಶ್ವರನ ನೆಂಟರು ಮತ್ತೊಂದು ಕಡೆ ಭದ್ರಕಾಳಿ ಬಳಗದವರು, ಮುಂಭಾಗದಲ್ಲಿ ನೆಂಟರು, ಭಕ್ತರು, ಮದುಮಗ-ಮದುಮಗಳಿಗೆ ಬೀಗರಾಗಿ ನೂರಾರು ಸಂಖ್ಯೆಯಲ್ಲಿ ಪಟ್ಟಣದ ಮಹಿಳೆಯರು ಸೇರಿದರು.
ಎಣ್ಣೆ ಹಚ್ಚುವ ಕಾರ್ಯಕ್ರಮಕ್ಕೆ ಬರುವಾಗ ದೇವರಿಗೆ ಬಾಸಿಂಗ ತರುವುದು, ಪಾಯಾಸ, ಅನ್ನ ನೈವೇದ್ಯವನ್ನು ಮಡಿಯಿಂದ ತಯಾರಿಸಿ ಮದು ಮಕ್ಕಳ ಭೋಜನ ತರಲಾಗಿತ್ತು. ಪರಂಪರೆಯಿಂದ ನಡೆದುಕೊಂಡು ಬಂದ ರೇಶ್ಮಿ ಮನೆತನದ ಬೆಳ್ಳಿಯ ಸುರಗಿ, ಶೆಟಗಾರ ಮನೆತನದ ಬಾಸಿಂಗ, ಕೊತ್ತಾ ಮನೆತನದ ದೇವರ ಹೊದಿಕೆ, ಪತ್ರಿ ಮನೆತನದ ದೇವರ ಹಂದುಲ ಸೇವೆ ಮಾಡಲಾಯಿತು. ಬಂಡಯ್ಯಾ ಸ್ವಾಮಿ ಸುರಿಗಿ ಸುತ್ತುವ ವ್ಯವಸ್ಥೆ ಮಾಡಿದರು.ಮಂಚದವರಾದ ಮುಸ್ತರಿ ಮನೆ, ಹಾರಕೂಡ, ಗೋರಟಾ, ದೇವಣಿ, ಮಾಕಾ ಮನೆತವರು, ಪೊಲೀಸ್ ಪಾಟೀಲ್, ಮಾಲಿ ಪಾಟೀಲ್ ಮನೆತನದಿಂದ ಆರತಿಯನ್ನು ತರಲಾಗಿತ್ತು. ಪತ್ರಿ ಮನೆತದವರು ವೀರಭದ್ರೇಶ್ವರ ಹಾಗೂ ಭದ್ರಕಾಳಿಕಾ ಮಾತಾಗೆ ಎಣ್ಣೆ ಹಚ್ಚುವ ಮೂಲಕ ಸ್ನಾನ ಮಾಡಿಸಿದರು. ನಂತರ ಗೋಧಿ ಹುಗ್ಗಿ, ಸುಖ ಶಾವಂಗಿ, ಅನ್ನ, ಸಾರು ನೈವೇದ್ಯ ಅರ್ಪಿಸಿದರು.
ವಿಜಯಲಕ್ಷ್ಮಿ ವೀರಣ್ಣಾ ಪಾಟೀಲ್, ವಿದ್ಯಾವತಿ ಭೀಮರಾವ ಪಟೀಲ್, ಯೋಗಿತಾ ಡಾ.ಚಂದ್ರಶೇಖರ ಪಾಟೀಲ್, ಅರ್ಚನಾ ಸಿದ್ದಲಿಂಗಪ್ಪಾ ಪಾಟೀಲ್, ಶಿವಲಿಲಾ ಪತ್ರಿ, ಸುಜಾತಾ ಚಕಪಳ್ಳಿ, ಜೈಶ್ರೀ ರೇಷ್ಮಿ, ಮಲ್ಲಮ್ಮಾ ರೇಷ್ಮಿ ನಿರ್ಮಲಾ ಶಶಿಕಾಂತ ಮಾಲಿ ಪಾಟೀಲ್, ಶಾಂತಾಬಾಯಿ ಮಠ, ಶುಭಾ ಮಠಪತಿ, ಮಲ್ಲಮ್ಮಾ ಪೂಜಾರಿ, ಇಂದುಮತಿ ಭಂಗಿಮಠ, ಕಮಲಾಬಾಯಿ ಕಮಲಾಪೂರೆ, ಜಗದೇವಿ ಪತ್ರಿ ಸೇರಿದಂತೆ ಪಟ್ಟಣದ ಮಹಿಳೆಯರು ಕಾರ್ಯಕ್ರಮದಲ್ಲಿ ಇದ್ದರು.