ರೇಣುಕಾಚಾರ್ಯ ಜಯಂತಿಯಿಂದ ವೀರಶೈವ ಪರಂಪರೆ

| Published : Mar 13 2025, 12:48 AM IST

ಸಾರಾಂಶ

ಆದಿ ರೇಣುಕಾಚಾರ್ಯ ಜಯಂತಿ ಮಹೋತ್ಸವ ಯುಗ ಯುಗಗಳಿಂದ ಆಚರಣೆ ಮಾಡುತ್ತ ಬರುವ ಮೂಲಕ ವೀರಶೈವ ಪರಂಪರೆಯಾಗಿ ಪರಿವರ್ತನೆಗೊಂಡಿದೆ ಎಂದು ಬೀರೂರು ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ । ರೇಣುಕಾಚಾರ್ಯ ಜಯಂತಿ ಮಹೋತ್ಸವ

ಕನ್ನಡಪ್ರಭ ವಾರ್ತೆ ಕಡೂರು

ಆದಿ ರೇಣುಕಾಚಾರ್ಯ ಜಯಂತಿ ಮಹೋತ್ಸವ ಯುಗ ಯುಗಗಳಿಂದ ಆಚರಣೆ ಮಾಡುತ್ತ ಬರುವ ಮೂಲಕ ವೀರಶೈವ ಪರಂಪರೆಯಾಗಿ ಪರಿವರ್ತನೆಗೊಂಡಿದೆ ಎಂದು ಬೀರೂರು ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕಡೂರು ತಾಪಂ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.

ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಪಂಚತತ್ವಗಳ ಅಧಿಪತಿಯಾಗಿ ಪಂಚಾಚಾರ್ಯರಾಗಿ ಸರ್ವ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ ಧರ್ಮೋಪದೇಶವನ್ನು ನೀಡುತ್ತಾ ಬಂದಿದ್ದಾರೆ. 12 ನೇ ಶತಮಾನದಿಂದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಯುಗ ಯುಗಗಳಿಂದಲೂ ರೇಣುಕಾಚಾರ್ಯರು ಇದ್ದರು, ಮುಂದೆಯೂ ಇರುತ್ತಾರೆ ಎಂದರು.

ಕಡೂರಿನ ಭಕ್ತರು ಶ್ರೀ ರೇಣುಕಾಚಾರ್ಯರ ಭಕ್ತರಾಗಿದ್ದು ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರು ಪಂಚಪೀಠಗಳ ಐದು ಗುರುಗಳನ್ನು ಕರೆಸಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿ ದಾಖಲೆ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅದೇ ಭಕ್ತಿ, ಪ್ರೀತಿಯನ್ನು ಜನತೆ ಇಟ್ಟುಕೊಂಡಿದ್ದಾರೆ. ಪುರಸಭೆ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ಅವರು ಶ್ರೀ ರೇಣುಕರ ಪ್ರತಿಮೆಯ ಪ್ರತಿಷ್ಠಾಪನೆಗೆ ಪಟ್ಟಣದ ಒಂದು ವೃತ್ತವನ್ನು ಗುರುತಿಸಿದರೆ ಅವರಿಗೆ ಸಮಾಜವು ಧನ್ಯವಾಗುತ್ತದೆ ಎಂದರು.

ತಾಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪ್ರಪಂಚಕ್ಕೆ ಸಾರಿದವರು ಪಂಚಾಚಾರ್ಯರು. ಇಂತಹ ಜಯಂತಿ ಮಹೋತ್ಸವಗಳು ಈಗೀನ ಪೀಳಿಗೆಗೆ ಪ್ರಸ್ತುತವಾಗಿದ್ದು ಕಳೆದ 3 ವರ್ಷಗಳಿಂದ ಆಚರಣೆ ಮಾಡುತ್ತ ಬರುತಿದ್ದೇವೆ ಎಂದರು.

ಕಡೂರಿನ ಶಾಸಕ ಕೆ.ಎಸ್.ಆನಂದ್, ಪುರಸಭಾ ಅಧ್ಯಕ್ಷರಿಗೆ ರೇಣುಕಾಚಾರ್ಯರ ವಿಗ್ರಹ ಪ್ರತಿಷ್ಠಾಪನೆಗೆ ಹಾಗೂ ನಮ್ಮ ಸಮಾಜದ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ನಿವೇಶನ ನೀಡಲು ಮನವಿ ಮಾಡಿದ್ದು ಅವರು ಸ್ಪಂದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರೇಣುಕಾಚಾರ್ಯರು ಲೋಕ ಕಲ್ಯಾಣಕ್ಕಾಗಿ ಧರ್ಮಪಾಲನೆ ಮಾಡುತ್ತಾ ನಮ್ಮ ಜಿಲ್ಲೆಯಲ್ಲಿ ನೆಲೆ ನಿಂತಿರುವುದು ಹೆಮ್ಮೆಯ ಸಂಗತಿ. ಸಮಾಜಗಳಿಗೆ ಧರ್ಮವನ್ನು ಸಾರುತ್ತ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಬೆಳೆಯುತ್ತಿರುವ ಪೀಠವಾಗಿದೆ ಎಂದರು.

ಕಡೂರಿನಲ್ಲಿ ರೇಣುಕಾಚಾರ್ಯರ ಪ್ರತಿಮೆ ಸ್ಥಾಪನೆಗೆ,ವಿದ್ಯಾರ್ಥಿನಿಯರ ನಿಲಯಕ್ಕೆ ಹಾಸ್ಟಲ್ ಹಾಗೂ ವೀರಶೈವರಿಗೆ ಪ್ರತೇಕ ಸ್ಮಶಾನಕ್ಕೆ ಸ್ಥಳ ಕೇಳಿದ್ದೀರಿ. ಹಂತಹಂತವಾಗಿ ನಿಮ್ಮ ಬೇಡಿಕೆಗಳನ್ನು ಶಾಸಕರು,ಪುರಸಭೆ ಸದಸ್ಯರೊಂದಿಗೆ ಮಾತನಾಡಿ ಈಡೇರಿಸುತ್ತೇವೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್‌, ತುರುವನಹಳ್ಳಿ ರೇಣುಕಪ್ಪ, ರಾಜಣ್ಣ, ಸಿದ್ದಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿದರು.

ಯಳನಾಡು ಮಠದ ಶ್ರೀ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭು ಕುಮಾರ ಸ್ವಾಮೀಜಿ, ಸಮಾಜದ ಮುಖಂಡರಾದ ಎಂ.ಎಚ್.ಪ್ರಕಾಶಮೂರ್ತಿ, ರಾಜಶೇಖರಯ್ಯ, ವಿವಿಧ ಸಮಾಜದ ಅಧ್ಯಕ್ಷರು, ಮತ್ತಿತರರು ಭಾಗವಹಿಸಿದ್ದರು.