ಸಾರಾಂಶ
ರಾಜ್ಯ ಸರ್ಕಾರದಿಂದ ಸೆ.22ರಿಂದ ನಡೆಸುತ್ತಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಸಿದ ಬಳಿಕವೂ ಸಮುದಾಯದ ಜನರಲ್ಲಿ ಗಣತಿಯ ವೇಳೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬ ಗೊಂದಲ ಮುಂದುವರೆದಿದೆ.
ಬೆಂಗಳೂರು : ರಾಜ್ಯ ಸರ್ಕಾರದಿಂದ ಸೆ.22ರಿಂದ ನಡೆಸುತ್ತಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಸಿದ ಬಳಿಕವೂ ಸಮುದಾಯದ ಜನರಲ್ಲಿ ಗಣತಿಯ ವೇಳೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬ ಗೊಂದಲ ಮುಂದುವರೆದಿದೆ. ವೀರಶೈವ ಮಹಾಸಭಾದ ನಿಲುವು ಒಂದಾಗಿದ್ದರೆ. ಪಂಚಮಸಾಲಿ ಸ್ವಾಮೀಜಿಗಳು ಹಾಗೂ ಕೆಲವು ನಾಯಕರು ಬೇರೆ ನಿಲುವು ತಳೆದಿದ್ದಾರೆ. ಇದರಿಂದಾಗಿ ಒಗ್ಗಟ್ಟಿನ ಬದಲು ಒಡಕಿನ ಪ್ರದರ್ಶನ ಆರಂಭವಾಗಿದೆ.
ಈ ಬಗ್ಗೆ ಸಮಾಜದ ನಾಯಕರಾದ ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ ಹಾಗೂ ಶ್ರೀಗಳಾದ ವಚನಾನಂದ ಸ್ವಾಮೀಜಿ ಅವರ ನುಡಿಗಳಲ್ಲಿ ಭಿನ್ನತೆ ವ್ಯಕ್ತವಾಗಿದೆ.
ಸೆ.19ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಏಕತಾ ಸಮಾವೇಶದಲ್ಲಿ ಪಂಚಪೀಠಾಧಿಶ್ವರರ ಆದಿಯಾಗಿ ಗುರು-ವಿರಕ್ತ ಪರಂಪರೆಯ ಸಾವಿರಾರು ಸ್ವಾಮೀಜಿಗಳು ಹಾಗೂ ಭಕ್ತರು ಸೇರಿದ್ದರು. ಆಗ ಜಾತಿಯ ಕಾಲಂನಲ್ಲಿ ಎಲ್ಲರೂ ಕಡ್ಡಾಯವಾಗಿ ವೀರಶೈವ-ಲಿಂಗಾಯತ ಎಂದು ನಮೂದಿಸಿ ನಿರ್ಧರಿಸಿದ್ದು, ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎನ್ನುವುದು ಜನರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಲಾಗಿತ್ತು. ಈ ಬಗ್ಗೆ ಸಚಿವರೂ ಆದ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ , ಮಹಾಸಭಾ ವತಿಯಿಂದ ಹೇಳಿಕೆ ನೀಡಿದ್ದರು. ಆದರೆ ಈ ವೇಳೆ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಮತ್ತು ವಿವಿಧ ಮಠಾಧೀಶರ ಅಭಿಪ್ರಾಯಗಳು ಭಿನ್ನವಾಗಿ ಕೇಳಿ ಬಂದಿದ್ದವು.
ಈ ಕುರಿತು ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ ಅವರು, ‘ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ, ಒಂದೇ ಎನ್ನುವುದು ಅಖಿಲ ಭಾರತ ವೀರಶೈವ ಮಹಾಸಭಾದ ನಿಲುವಾಗಿದೆ. ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರೂ ಸಹ ವೀರಶೈವ-ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ್ದರು. ಹೀಗಾಗಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮುಂದುವರಿಯಲಿದೆ. ಜಾತಿ ಗಣತಿ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ-ಲಿಂಗಾಯತ ಧರ್ಮ ಎಂದು ಬರೆಸಬೇಕು ಎಂಬುದು ಮಹಾಸಭಾ ನಿಲುವಾಗಿದೆ. ಆದರೆ, ಪ್ರತ್ಯೇಕ ಧರ್ಮ ಎಂದು ಇನ್ನೂ ಗುರುತಿಸಿಲ್ಲ. ಹೀಗಾಗಿ ಇತರೆ ಎಂದು ಧರ್ಮದ ಕಾಲಂನಲ್ಲಿ ನಮೂದಿಸಬೇಕು ಅಥವಾ ಆತ್ಮಸಾಕ್ಷಿಯಂತೆ/ವಿವೇಚನೆಗೆ ತಕ್ಕಂತೆ ಬರೆಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ವಚನಾನಂದ ಶ್ರೀಗಳ ನಿಲುವು:
ಇತ್ತ ಸಮುದಾಯದ ಒಳಪಂಡವಾದ ಪಂಚಮಸಾಲಿ ಸಮಾಜದ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿ, ‘ಸೆ.19ರಂದು ನಡೆದ ಏಕತಾ ಸಮಾವೇಶಕ್ಕೂ ಪಂಚಮಸಾಲಿ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಪಂಚಮಸಾಲಿ ಲಿಂಗಾಯತ ಎಂದೇ ಬರೆಯಿಸಬೇಕು. ಈ ಕುರಿತು ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಕರಪತ್ರ ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪಂಚಮಸಾಲಿ ಪೀಠಗಳು, ಪಂಚಮಸಾಲಿ ಸಂಘ ಏನು ಹೇಳುತ್ತದೆಯೋ ಅದನ್ನು ಸಮಾಜದ ಜನ ಪಾಲಿಸಬೇಕು’ ಎಂದರು.
ಪ್ರತ್ಯೇಕ ಧರ್ಮ ಬೇಕು-ಕಾಶಪ್ಪನವರ:ಏಕತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪಂಚಮಸಾಲಿ ಜನಾಂಗದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪರೋಕ್ಷವಾಗಿ ತಮ್ಮ ಸಮಾಜದ (ಪಂಚಮಸಾಲಿ) ಸ್ವಾಮೀಜಿಗಳ ವಿರುದ್ಧವೇ ಕಿಡಿಕಾದರು.
‘ವೀರಶೈವ ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮವಾಗಿದೆ. ನಾವು ಯಾರೋ ಹಿಡಿದ ಕೊಡೆಯ ಅಡಿಯಲ್ಲಿ ಹೋಗಿ ನಿಲ್ಲುವುದು ಬೇಡ. ನಮಗೆ ಪ್ರತ್ಯೇಕ ಧರ್ಮ ಹುಟ್ಟು ಹಾಕುವ ಶಕ್ತಿ ಇದೆ. ಒಗ್ಗಟ್ಟಿನ ಮಂತ್ರ ಹೇಳದಿದ್ದರೆ ನಮಗೆ ಉಳಿಗಾಲವಿಲ್ಲ. ವೀರಶೈವ ಮಹಾಸಭಾ ಕೈಗೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಮಾಜವನ್ನು ಬಲಿ ಕೊಡುತ್ತಿದ್ದಾರೆ. ಹಾಗಾಗಿ ಸಮುದಾಯದ ಎಲ್ಲರೂ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಬೇಕು’ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ನೇತೃತ್ವದ ತಂಡವು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹ ಮಾಡುತ್ತಿದೆ. ಇದು ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಿದೆ.
- ವೀರಶೈವ ಲಿಂಗಾಯತ ಧರ್ಮ ಅಥವಾ ಇತರೆ ಎಂದು ಬರೆಸಿ: ಖಂಡ್ರೆ
- ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಿ: ವಚನಾನಂದ
- ಪಂಚಮಸಾಲಿ ಶ್ರೀಗಳ ನುಡಿಗೆ ಕಾಶಪ್ಪನವರ ಅಪಸ್ವರ
- ಪ್ರತ್ಯೇಕ ಲಿಂಗಯತ ಧರ್ಮಕ್ಕಾಗಿ ಜಾಮದಾರ್ ಹೋರಾಟ
;Resize=(690,390))
;Resize=(128,128))
;Resize=(128,128))