ವೀರಶೈವ ಲಿಂಗಾಯತ ಸಮಾಜದ ರಕ್ತದಲ್ಲಿ ಬಸವಣ್ಣನವರ ಚಿಂತನೆ ಹರಿಯುತ್ತಿದೆ. ಬಸವಣ್ಣನವರು ರೂಪಿಸಿದ ಅನುಭವ ಮಂಟಪದ ಪರಿಕಲ್ಪನೆ ಎಲ್ಲರನ್ನೂ ಒಳಗೊಳ್ಳುವ ವಿಶಾಲ ಆಶಯ ಹೊಂದಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಬಳ್ಳಾರಿ: ವೀರಶೈವ ಲಿಂಗಾಯತ ಮಠ-ಮಾನ್ಯಗಳು ಕೇವಲ ಲಿಂಗಾಯತ ಸಮುದಾಯಕ್ಕೆ ಅನ್ನ, ಅಕ್ಷರ, ಆಶ್ರಯ ನೀಡುವ ಕಾರ್ಯಕ್ಕೆ ಸೀಮಿತವಾಗದೆ, ಎಲ್ಲ ಸಮಾಜದ ಮಕ್ಕಳಿಗೂ ಶಿಕ್ಷಣ ಕಲಿಸುವ ಕಾಳಜಿಯ ಶ್ರೇಷ್ಠ ಕಾಯಕವನ್ನು ಮಾಡಿಕೊಂಡು ಬಂದಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ನಗರದ ಹೀರದಸೂಗಮ್ಮ ಶಾಲೆಯ ಮೈದಾನದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ವೀರಶೈವ ಲಿಂಗಾಯತ ಸಮಾಜದ ರಕ್ತದಲ್ಲಿ ಬಸವಣ್ಣನವರ ಚಿಂತನೆ ಹರಿಯುತ್ತಿದೆ. ಬಸವಣ್ಣನವರು ರೂಪಿಸಿದ ಅನುಭವ ಮಂಟಪದ ಪರಿಕಲ್ಪನೆ ಎಲ್ಲರನ್ನೂ ಒಳಗೊಳ್ಳುವ ವಿಶಾಲ ಆಶಯ ಹೊಂದಿದೆ. ಎಲ್ಲ ಸಮುದಾಯದ ಜನರನ್ನು ಒಟ್ಟಾಗಿ ಕರೆದೊಯ್ಯಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಇದೇ ತತ್ವದಡಿ ವೀರಶೈವ ಲಿಂಗಾಯತ ಮಠಗಳು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಅನ್ನ, ಅಕ್ಷರ ಹಾಗೂ ಆಶ್ರಯ ನೀಡುವ ಮಹತ್ವದ ಕಾರ್ಯ ಮಾಡಿವೆ ಎಂದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಪಾರಂಪರಿಕ ಶಿಕ್ಷಣದ ಜತೆಗೆ ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ)ಯನ್ನು ಅಳವಡಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಬದಲಾಗದೆ ಹೋದರೆ ಶೈಕ್ಷಣಿಕವಾಗಿ ಹಿಂದುಳಿಯುವ ಅಪಾಯವಿದೆ ಎಂದು ಎಚ್ಚರಿಸಿದರು.

ವಿದೇಶಿ ವಿಶ್ವವಿದ್ಯಾಲಯಗಳೂ ಭಾರತಕ್ಕೆ ಆಗಮಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿ ಮುಂದಡಿಯಿಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸಂಸ್ಥೆಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ತ್ಯಾಗ, ಸೇವೆ ಹಾಗೂ ಕೊಡುಗೆಯಿಂದಲೇ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅವಕಾಶ ದೊರೆತಿದೆ. ಹೀರದ ಸೂಗಮ್ಮ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಅನೇಕ ಮಹನೀಯರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಶ್ರೇಷ್ಠ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಚಿವ ಬಿ. ನಾಗೇಂದ್ರ ಅವರು ವೀರಶೈವ ವಿದ್ಯಾವರ್ಧಕ ಸಂಘದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ಸಂಘದ ಯಾವುದೇ ಕೆಲಸವಿರಲಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಂಸದ ಈ. ತುಕಾರಾಂ, ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಎಮ್ಮಿಗನೂರು ಶ್ರೀವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿ ಹಾಗೂ ಪಾಲ್ತೂರು ಕಲ್ಲುಹೊಳೆ ಮಠದ ಶ್ರೀ ಚನ್ನವೀರ ಮಹಾಸ್ವಾಮಿ ಮಾತನಾಡಿದರು.

ವೀವಿ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್, ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಂಸದ ಈ. ತುಕಾರಾಂ, ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಮೇಯರ್ ಪಿ. ಗಾದೆಪ್ಪ, ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್, ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಹುಕಾರ ಸತೀಶ್ ಬಾಬು, ಕ್ಯಾತ್ಯಾಯಿನಿ ವಿ.ಎಸ್. ಮರಿದೇವಯ್ಯ, ಹೀರದಸೂಗಮ್ಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಯಾಳ್ಪಿ ಮೇಟಿ ಪಂಪನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ವೀರಶೈವ ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು. ವೀವಿ ಸಂಘದ ಉಚಿತ ಪ್ರಸಾದ ನಿಲಯಕ್ಕೆ ₹11 ಲಕ್ಷಗಳನ್ನು ವೀರಶೈವ ಸಮಾಜದ ಮುಖಂಡ ಶ್ರೀನಿವಾಸ ರೆಡ್ಡಿ ಘೋಷಿಸಿದರು.