ರಾಣಿಬೆನ್ನೂರು: ಅನಾದಿಕಾಲದ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಧರ್ಮ ಇಂದು ಕವಲುದಾರಿಯಲ್ಲಿ ಸಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಬಾಲೇಹೊಸೂರ ಮತ್ತು ಶಿರಹಟ್ಟಿ ಜಗದ್ಗುರು ಮಹಾ ಸಂಸ್ಥಾನಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
ನಗರದ ದೊಡ್ಡಪೇಟೆ ಪಂಚಾಚಾರ್ಯ ಗುರು ಕಾರುಣ್ಯ ಮಂಗಲ ಮಂದಿರದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ ಹಾಗೂ ವೀರಶೈವ ಲಿಂಗಾಯತ ನೌಕರರ ವೇದಿಕೆಯ ವತಿಯಿಂದ ಸಮಾಜದ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಸಮವಸ್ತ್ರ-ಹಾಗೂ ಧನಸಹಾಯ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಮತ್ತು ಧರ್ಮದ ತತ್ವ ಸಿದ್ಧಾಂತದ ಅಡಿಯಲ್ಲಿ ನಮ್ಮ ಪೂರ್ವಜರು, ಗುರುಗಳು ಮತ್ತು ಸಮಾಜದ ಆನುಯಾಯಿಗಳು ಬದುಕಿ ಬಾಳಿದ್ದಾರೆ. ಇಂದಿನ ಮಕ್ಕಳಲ್ಲಿ ಆ ಪರಂಪರೆ ಉಳಿದಿಲ್ಲ, ಪರಿಣಾಮ ಸಮಾಜ ಒಂದುಗೂಡಿಸಲು ಹೊರಟಷ್ಟು ಮತ್ತಷ್ಟು ಒಡೆಯುತ್ತಲೇ ಸಾಗಿದೆ ಎಂದರು.ವೀರಶೈವ ಲಿಂಗಾಯತ ಸಮಾಜವನ್ನು ಕಟ್ಟಲು ಅಂದಿನ ದೂರ ದೃಷ್ಟಿಯುಳ್ಳ ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅವರ ಆಸೆ ಎಲ್ಲರೂ ಒಂದೇ ಅಡಿಯಲ್ಲಿ ಇರಬೇಕು ಎನ್ನುವುದಾಗಿತ್ತು, ಆದರೆ ಇಂದು ಆಗುತ್ತಿರುವುದೇನು ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯತ ಧರ್ಮವು ವ್ಯಕ್ತಿ ಪ್ರಧಾನವಾಗಿರದೇ ತತ್ವ ಪ್ರಧಾನವಾಗಿದೆ. ಅಷ್ಟಾವರಣ, ಪಂಚಾಚಾರ, ಷಟ್ ಸ್ಥಳ, ಈ ಮೂರು ತತ್ವಗಳು ಗಮನದಲ್ಲಿರಿಸಿಕೊಂಡು ಸಮಾಜ ಕಟ್ಟಬೇಕು. ಸಮಾಜದ ಜಾಗೃತಿ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಅಂತರಂಗದ ಜಾಗೃತಿಯಾಗಿರಬೇಕು ಮತ್ತು ಮನೆ ಮನಗಳಲ್ಲಿ ಸಂಘಟನೆಯಾಗಬೇಕು. ಮತ್ತೊಂದು ಸಮಾಜವು ತುಳಿದು ಬೆಳೆಯುವುದು ಬೇಡ. ತಿಳಿದು ಬೆಳೆಯುವ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದರು.ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯರು ಮಹಾಸ್ವಾಮಿಗಳು ಮಾತನಾಡಿ, ಇದ್ದವರು ಇಲ್ಲದವರಿಗೆ ಸಹಾಯಹಸ್ತ ನೀಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ. ಮಾನವೀಯ ನೆಲಗಟ್ಟಿನಲ್ಲಿ ನಮ್ಮ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕೆಲಸ ನಡೆಯಬೇಕಾಗಿದೆ ಎಂದರು.
ಮಾಜಿ ಶಾಸಕ ಆರುಣಕುಮಾರ ಪೂಜಾರ ಮಾತನಾಡಿ, ವೀರಶೈವ ಲಿಂಗಾಯತರು ಅಖಿಲ ಭಾರತ ಮಟ್ಟದಲ್ಲಿ ಒಂದಾಗಬೇಕು. ಭವಿಷ್ಯದ ಮಕ್ಕಳಿಗೆ ನಮ್ಮ ಸಂಸ್ಕೃತಿ ವಿಚಾರ ತತ್ವ ತಿಳಿಸುವ ಮಹತ್ವದ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಾನಿಗಳು, ಕ್ಷೇತ್ರ ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. 40ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಸಂತೋಷಕುಮಾರ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಬಸವರಾಜ ಪಾಟೀಲ, ಡಾ. ಎಸ್.ಎಸ್. ಬಣಗಾರ, ಮಂಜುನಾಥ ಗೌಡಶಿವಣ್ಣನವರ, ಎಸ್.ಎಸ್. ರಾಮಲಿಂಗಣ್ಣನವರ, ಮಲ್ಲಿಕಾರ್ಜುನ ಅಂಗಡಿ, ಸಿದ್ದಣ್ಣ ಚಿಕ್ಕಬಿದರಿ, ಶೇಖಣ್ಣ ಹೊಸಗೌಡ್ರ, ಸುನಂದಮ್ಮ ತಿಳವಳ್ಳಿ, ರಾಜೇಶ್ವರಿ ಪಾಟೀಲ, ವಿ.ಪಿ. ಲಿಂಗನಗೌಡ್ರ, ಎಸ್.ಸಿ. ಷಡಕ್ಷರಿಮಠ, ಜಗದೀಶ ಮಳೆಮಠ, ಕೊಟ್ರೇಶ ಕೆಂಚಪ್ಪನವರ, ವಿ.ಎಸ್. ಹಿರೇಮಠ, ಹಾಲೇಶಪ್ಪ ಗೌಳಿ, ಜಿ.ಜಿ. ಹೊಟ್ಟೆಗೌಡರ, ಆರ್.ಜೆ. ಪಾಟೀಲ, ಫಕ್ಕೀರೇಶ ಭಸ್ಮಾಂಗಿಮಠ, ಕಸ್ತೂರಮ್ಮ ಪಾಟೀಲ ಇದ್ದರು.