ಸಾರಾಂಶ
ಹುಬ್ಬಳ್ಳಿ: ಹಿಂದಿನಿಂದಲೂ ವೀರಶೈವ ಲಿಂಗಾಯತರು ಉದ್ಯೋಗ ಮಾಡುವವರಲ್ಲ, ಸೃಷ್ಟಿಸುವವರು. ಇಂದಿನ ಯುವ ವೀರಶೈವ ಲಿಂಗಾಯತರು ಇದೇ ಪದ್ಧತಿ ಮುಂದುವರೆಸಿಕೊಂಡು ಹೋಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಲಹೆ ನೀಡಿದರು.
ಶುಕ್ರವಾರ ಸಂಜೆ ಇಲ್ಲಿನ ಬಿವಿಬಿ ಕಾಲೇಜಿನ ಆವರಣದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್-2024ಗೆ ಚಾಲನೆ ನೀಡಿ ಮಾತನಾಡಿದರು.ವೀರಶೈವ ಲಿಂಗಾಯತ ಸಮಾಜ ಬಾಂಧವರು ಎಂದಿಗೂ ಕಾಯಕವೇ ಕೈಲಾಸ ಎಂದು ಪಾಲಿಸಿಕೊಂಡು ಬಂದವರು. ತಮ್ಮ ಕೆಲಸದಲ್ಲಿ ಶ್ರದ್ಧೆ, ನಂಬಿಕೆಯನ್ನಿಟ್ಟುಕೊಂಡು ಇತರರಿಗೆ ಮಾದರಿಯಾಗುವುದರೊಂದಿಗೆ ಜೀವನದಲ್ಲಿ ಕಠಿಣ ಶ್ರದ್ಧೆ, ಪರಿಶ್ರಮ ಪಟ್ಟಲ್ಲಿ ಯಶಸ್ಸು ಖಚಿತ ಎಂಬುದನ್ನು ತೋರಿಸಿಕೊಟ್ಟವರು.
ಲಿಂಗಾಯತ ಸಮಾಜ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಬೇರೆ ಬೇರೆ ರಾಜ್ಯ, ವಿದೇಶಗಳಲ್ಲೂ ಸಮಾಜ ಬಾಂಧವರು ನೆಲೆಸಿ ತಮ್ಮ ಜೀವನ ಕಂಡುಕೊಂಡವರು. ಕೆಲವರು ಅಲ್ಲಿಯೇ ಉದ್ಯಮ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಇತರರಿಗೆ ಮಾದರಿಯಾದವರು.ತಿಳಿಸುವ ಕಾರ್ಯವಾಗಿರಲಿಲ್ಲ:
ಪ್ರಜಾಪ್ರಭುತ್ವದ ಮೂಲವ್ಯಕ್ತಿ ಬಸವಣ್ಣವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪ ರಚಿಸಿ ಅಕ್ಕಮಹಾದೇವಿ ಸೇರಿದಂತೆ ಮಹಿಳೆಯರು, ಎಲ್ಲ ವರ್ಗದ ಜನರಿಗೂ ಅಲ್ಲಿ ಸ್ಥಾನಮಾನ ನೀಡಿದ ಮೂಲಪುರುಷರು. ಆದರೆ, ಇದರ ಕುರಿತು ಜನರಿಗೆ ತಿಳಿಸುವ ಕಾರ್ಯವೇ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಸಂಸತ್ ಭವನಕ್ಕೆ ಭಾರತ ಮಂಟಪ ಎಂದು ಹೆಸರಿಡುವ ಮೂಲಕ ಬಸವಣ್ಣನವರನ್ನು ಜಗತ್ತಿಗೆ ಪರಿಚಯಿಸಲಾಯಿತು. ಇಂದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದೇ ಕಾರಣಕ್ಕೆ ಲಂಡನ್‌ನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.ಭಾರತ ಜಗತ್ತಿಗೆ ಎಂಜಿನ್ ಗಾಡಿ:
ಇಂದು ಭಾರತ ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ 3ನೇ ಸ್ಥಾನ ತಲುಪಲಿದ್ದು, 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮುಂದಿನ 5 ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ಅಭಿವೃದ್ಧಿಗಾಗಿಯೇ ₹100 ಲಕ್ಷ ಕೋಟಿಯ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಮುಂದಿನ 15 ವರ್ಷಗಳಲ್ಲಿ ಭಾರತ ಜಗತ್ತಿಗೆ ಎಂಜಿನ್ ಗಾಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವ್ಯಾಪಾರ ವೃದ್ಧಿಗೆ ಮಾರ್ಗದರ್ಶನ:
ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳು ಮತ್ತು ವೃತ್ತಿಪರರ ಜತೆ ವ್ಯಾಪಾರಕ್ಕೆ ಪೂರಕವಾದ ಮಾಹಿತಿ ಹಂಚಿಕೆ, ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ವೃದ್ಧಿಸುವ ಕುರಿತು ಪರಿಣತರ ಮಾರ್ಗದರ್ಶನ ಮತ್ತು ವಿಚಾರ ವಿನಿಮಯ ಮಾಡುವ ಉದ್ದೇಶ ಹೊಂದಿದೆ.ಸಂಘಟಿತರಾಗಿ:
ತಲ ತಲಾಂತರದಿಂದ ವ್ಯಾಪರ-ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯ, ಇತ್ತೀಚಿನ ವರ್ಷಗಳಲ್ಲಿ ನೌಕರಿ ಅರಸುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾಳ್ಮೆಯಿಂದ ನಡೆದುಕೊಂಡರೆ ದೇಶವನ್ನು ರಾಜಕೀಯವಾಗಿ ಆಳಬಹುದು. ಆದರೆ, ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಘಟಿತರಾಗುತ್ತಿದ್ದು, ನಮ್ಮ ಜನ ಏನು ಮಾಡುತ್ತಿದ್ದಾರೆ. ಎಷ್ಟು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸುವುದಕ್ಕಾಗಿಯೇ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.ಕೆಎಲ್‌ಇ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ, ಕಾನ್‌ಕ್ಲೇವ್‌ನ ಮುಖ್ಯಸಂಚಾಲಕ ಸಂತೋಷ ಕೆಂಚಾಂಬ, ಸಹಸಂಚಾಲಕ ಚನ್ನು ಹೊಸಮನಿ, ರಮೇಶ ಪಾಟೀಲ, ವಿಕ್ರಮ ಕರಾಚೂರ, ಡಾ. ಧರ್ಮಪ್ರಸಾದ, ಶಿವಪ್ರಸಾದ ತೆಲ್ಲೂರ, ನಾಗರಾಜ ಯಲಿಗಾರ, ಪಿ.ಜಿ. ಗುಡಿಮನಿ, ಜಗದೀಶ ನಾಯಕ ಸೇರಿದಂತೆ ಹಲವರಿದ್ದರು.