ಕನ್ನಡಪ್ರಭ ವಾರ್ತೆ ಬೆಳಗಾವಿ

ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ವಿಚಾರಗಳನ್ನು ನಾವು ಕೇಳುವುದಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ನಡೆ-ನುಡಿಯಲ್ಲಿ ಮೂಡಿಬರಬೇಕು ಎಂದು ಹುಕ್ಕೇರಿ ಹಿರೇಮಠದ ಗುರು ಶಾಂತೇಶ್ವರ ಸಂಸ್ಥಾನ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯಿಂದ ಭಾನುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಜಂಗಮರಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಅವರು ಯಾವುದೋ ಒಂದು ಜಾತಿ, ಮತ, ಪಂಥಕ್ಕೆ ಬಂಧಿತವಾಗಿರಲಿಲ್ಲ. ಎಲ್ಲ ಧರ್ಮೀಯರು ಸೇರಿ ಈ ಕಾರ್ಯಕ್ರಮ ಆಯೋಜಿಸಿರುವುದು ರೇಣುಕಾಚಾರ್ಯರ ಸಮಾನತೆಯ ಸಂದೇಶಕ್ಕೆ ಜೀವಂತ ಉದಾಹರಣೆ. ಇದೇ ಅವರ ತತ್ವದ ಸಾರ್ಥಕತೆ ಎಂದು ಹೇಳಿದರು.

ಜಾತಿ ಮಾಡುವವರು ಜಂಗಮರಲ್ಲ ಎಂಬ ಮಾತಿನ ಅರ್ಥ ಗಂಭೀರ. ಜಂಗಮ ಎಂದರೆ ಚರತತ್ವ. ಶಿವತತ್ವವನ್ನು ಹೊತ್ತು ನಡೆಯುವವರು. ಜಾತಿ ಭೇದ ಮಾಡುವವನು ಜಂಗಮನಾಗಲಾರ. ಎಲ್ಲರೂ ಒಂದೇ ಶಿವತತ್ವದ ಮಕ್ಕಳು ಎಂಬುದೇ ರೇಣುಕಾಚಾರ್ಯರ ಸಂದೇಶ. ಭೇದಭಾವ ತೊರೆದು ಸಮಾನತೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ, ದ್ವಾಪರ ಯುಗದಲ್ಲಿಯೇ ಪ್ರಕಾಶಿಸಿದ ದಿವ್ಯ ಚೈತನ್ಯವೆಂದು ಪರಂಪರೆಯಲ್ಲಿ ನಂಬಲಾಗುವ ರೇಣುಕಾಚಾರ್ಯರು ಲಿಂಗೋದ್ಭವ ತತ್ವದ ಮೂಲಕ ಶಿವಭಕ್ತಿಗೆ ಜೀವಂತ ರೂಪ ನೀಡಿದ ಮಹಾನುಭಾವರು. ಕೇವಲ ಧರ್ಮ ಗುರುಗಳಲ್ಲ. ತತ್ವಜ್ಞಾನಿ, ಸಮಾಜ ಮಾರ್ಗದರ್ಶಕ ಹಾಗೂ ಆಚಾರಪ್ರವರ್ತಕರು. ಅನೇಕ ಆಗಮ, ನುಡಿ ಮತ್ತು ಆಚರಣೆಗಳ ಮೂಲಕ ವೀರಶೈವ ಧರ್ಮಕ್ಕೆ ಸೈದ್ದಾಂತಿಕ ನೆಲೆಬೀಡು ನೀಡಿದರು. ವೀರಾಗಮ ಪರಂಪರೆಯ ಪ್ರಕಾರ ಸಾವಿರಾರು ವರ್ಷಗಳ ಹಿಂದೆಯೇ ಧರ್ಮಕ್ಕೆ ದೃಢವಾದ ತಾತ್ವಿಕ ಆಧಾರ ಸ್ಥಾಪಿಸಲಾಯಿತು ಎಂಬ ನಂಬಿಕೆ ಇದೆ ಎಂದು ಹೇಳಿದರು.


ಮಠ ಮಾನ್ಯಗಳ ನಿರ್ಮಾಣ, ಜ್ಞಾನ ದಾಸೋಹಗಳ ವ್ಯವಸ್ಥೆ, ಶಿಷ್ಯ ಪರಂಪರೆಯ ಬೆಳವಣಿಗೆ ರೇಣುಕಾಚಾರ್ಯರ ಮಹತ್ವದ ಕೊಡುಗೆಗಳು. ಮಠಗಳು ಕೇವಲ ಕಟ್ಟಡಗಳಲ್ಲ. ಅವು ಜ್ಞಾನಮಂದಿರಗಳು. ಶಿವಾಚಾರ್ಯರು ಧರ್ಮದ ದೀಪ ಹಚ್ಚಿ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಭಕ್ತಿ, ಅನುಷ್ಠಾನ, ಸೇವೆಗಳ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂಬುದೇ ಅವರ ಸಂದೇಶ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ ಮಾತನಾಡಿ, ರೇಣುಕಾಚಾರ್ಯರು ಕೇವಲ ಆಧ್ಯಾತ್ಮಿಕ ಗುರುಗಳಲ್ಲ, ಸಮಾಜ ಸುಧಾರಕರೂ ಆಗಿದ್ದರು. ಲಿಂಗಪೂಜೆ, ಭಕ್ತಿ, ದಾಸೋಹ ಮತ್ತು ಸಮಾನತೆಯ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಭಕ್ತಿ ಎಂದರೆ ಕೇವಲ ಆಚರಣೆ ಅಲ್ಲ. ಅದು ಬದುಕಿನ ಮಾರ್ಗ ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ಸಾರಿದ್ದಾಗಿ ತಿಳಿಸಿದರು.

ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಸವಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸುರೇಶ ಯಾದವ್, ಎಸ್.ಎಸ್.ಸಂಗೊಳ್ಳಿ, ಶಿವಪುತ್ರ ಗಂಗಾಪುರ, ರೋಹನ ಜವಳಿ, ರಾಮು ಗುಗವಾಡ, ಬಸವರಾಜ ಹಳಂಗಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿ.ಜಿ.ನೀರಲಗಿಮಠ ಸ್ವಾಗತಿಸಿದರು. ಸುನಿತಾ ದೇಸಾಯಿ ನಿರೂಪಿಸಿದರು. ಮೊದಲು ನಗರದ ಚನ್ನಮ್ಮ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪೊಲೀಸ್ ಆಯುಕ್ತ ಭೂಷಣ ಬೊರಸೆ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.