ರಾಯಚೂರು ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಇತಿಹಾಸದ ಪುಟಗಳಲ್ಲಿ ಸಾಹಸ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ವೀರವನಿತೆ ಒಣಕೆ ಓಬವ್ವ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತ ನಾಡಿದರು. ಚಿತ್ರದುರ್ಗದ ಮದಕರಿ ನಾಯಕನ ಆಸ್ಥಾನದ ಇತಿಹಾಸವು ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ. ಹೈದರಾಲಿ ಸೇನೆಯು ಚಿತ್ರದುರ್ಗದ ಕೋಟೆಯನ್ನು ಭೇದಿಸಲು ಎರಡು-ಮೂರು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿ ರಲಿಲ್ಲ. ಕೊನೆಗೆ ಕಳ್ಳಮಾರ್ಗದಿಂದ ಕೋಟೆಯೊಳಗೆ ನುಗ್ಗಿ ವಿಜಯ ಸಾಧಿಸಲು ಹೈದರಾಲಿ ಮಾಡಿದ ಕುತಂತ್ರವನ್ನು ಓಬವ್ವ ಧೈರ್ಯದಿಂದ ಮೆಟ್ಟಿನಿಂತಳು. ಊಟದ ವೇಳೆ ಕೋಟೆಯ ಕಾವಲುಗಾರ ಮುದ್ದಹನುಮಪ್ಪನಿಗೆ ಕಾವಲು ಕಾಯುವ ಜವಾಬ್ದಾರಿಯಿದ್ದಾಗ, ಒಳಗೆ ನುಗ್ಗುತ್ತಿದ್ದ ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಒಣಕೆಯಿಂದ ಹೊಡೆದುರುಳಿಸಿ, ಕೋಟೆಯನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸಿದ ಆಕೆಯ ಸಾಹಸಗಾಥೆ ರೋಮಾಂಚನಕಾರಿಯಾಗಿದೆ ಎಂದರು.
ತಹಸೀಲ್ದಾರ್ ಸುರೇಶ್ ವರ್ಮಾ ಮಾತನಾಡಿ, ದೇಶ ರಕ್ಷಣೆಗಾಗಿ ಒನಕೆಯನ್ನೇ ಶಸ್ತ್ರವನ್ನಾಗಿಸಿದ ಧೀರ ಮಾತೆ. ವಂಶ ಪರಂಪರೆ ರಾಜಕೀಯದಲ್ಲಿ ರಾಣಿ ಅರ್ಹತೆಯಿಂದ ತರಬೇತಿಯನ್ನು ಪಡೆದು, ವೀರಸೇನೆ ಹಾಗೂ ಎದುರಾಳಿಯ ಸೈನ್ಯವನ್ನು ಮೆಟ್ಟಿಸುವ ಇತಿಹಾಸವನ್ನು ನಾವು ಕಾಣುತ್ತೇವೆ. ಆದರೆ, ಒನಕೆ ಒಬವ್ವ ಯಾವುದೇ ರಾಜಕೀಯದಲ್ಲಿ ಹುಟ್ಟಿಲ್ಲ, ಸೈನ್ಯದ ತರಬೇತಿಯೂ ಇಲ್ಲ, ಶಸ್ತ್ರಾಸ್ತ್ರ ಹಿಡಿಯುವ ಅಭ್ಯಾಸವೂ ಇಲ್ಲ. ಹಂತಹ ಸಾಮಾನ್ಯ ಕುಟುಂಬದಲ್ಲಿ ಬಡತನದಲ್ಲಿರುವ ಮಾತೆ, ದೇಶಕ್ಕೆ ಅವಶ್ಯಕತೆ ಇದ್ದಾಗ ದೇಶದ ರಕ್ಷಣೆ ಮಾಡುತ್ತಾಳೆ ಅನ್ನುವ ಸಂದೇಶವನ್ನು ಜಗತ್ತಿಗೆ ಸಾರಿದವರು ಒನಕೆ ಒಬವ್ವ ಎಂದು ತಿಳಿಸಿದರು.ನಂತರ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ.ಶರಣಪ್ಪ ಚಲವಾದಿ ಅವರು ಉಪನ್ಯಾಪಕ ನೀಡಿದರು.
ಭಾವಚಿತ್ರದ ಮೆರೆವಣಿಗೆಗೆ ಚಾಲನೆ: ಜಯಂತಿ ಹಿನ್ನೆಲೆಯಲ್ಲಿ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಸೇರಿ ವಿವಿಧ ಗಣ್ಯರು, ಸಮಾಜದ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಯು ವಿವಿಧ ಕಲಾ ತಂಡಗಳೊಂದಿಗೆ ಸಾಗಿ ರಂಗಮಂದಿರಕ್ಕೆ ಬಂದು ತಲುಪಿತು.ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಂಭಿಯತರ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೋಮಿನಿ, ಲಲಿತಾ ಅಂಜಿನೇಯ, ಜಗನ್ನಾಥ ಸುಂಕರಿ, ಅರ್ಚನಾ ಸುಂಕರಿ, ಸಂತೋಷ ನಂದಿ, ಮಾರೆಪ್ಪ, ಎಂ.ವಸಂತ, ದಯಾನಂದ, ಶಿವರಾಜ್, ವಿಶ್ವನಾಥ, ದೇವಿಂದ್ರ, ರಾಘವೇಂದ್ರ, ಭೀಮಣ್ಣ ಸೇರಿ ಇತರರು ಇದ್ದರು.