ಸಾರಾಂಶ
ಭಾಲ್ಕಿ ತಾಲೂಕಿನ ಕಾಸರತುಗಾಂವದಲ್ಲಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ನಿಮಿತ್ತ ಅಗ್ನಿ ತುಳಿಯುವ ಕಾರ್ಯಕ್ರಮಕ್ಕೆ ಶಂಕ್ರಯ್ಯ ಪರ್ವತ ಮಠ ಹಾಗೂ ಬಾಬು ಸ್ವಾಮಿ ಕಾನೊಡೆಯವರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ ಭಾಲ್ಕಿ ತಾಲೂಕಿನ ಗಡಿ ಗ್ರಾಮವಾದ ಕಾಸರತುಗಾಂವ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸಹ ಕರಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಭಕ್ತಿ ಹಾಗೂ ಶೃದ್ಧೆಯಿಂದ ನೆರವೇರಿತು.
ಗ್ರಾಮದ ಹಲಿಗೆ ವಾದಕ ಬಾಬು ಗ್ರಾಮದ ಓಣಿ ಓಣಿಗೆ ತೆರಳಿ ಮುತ್ತೈದೆಯರನ್ನು ಎಬ್ಬಿಸಿ ಆರತಿ ಸಮೇತ ವೀರಭದ್ರೇಶ್ವರ ಮಂದಿರಕ್ಕೆ ಕರೆ ತಂದರು.ಪಲ್ಲಕ್ಕಿ ಹೊತ್ತುವ ಮಹೇಶ ಬಿರಾದಾರ, ರಮೇಶ ಬಿರಾದಾರ, ದಿಲೀಪ ಬಿರಾದಾರ, ಬಾಬುರಾವ ನಾಗಾಶಂಕ್ರೆ ಮಂದಿರಕ್ಕೆ ಆಗಮಿಸಿದ ಬಳಿಕ ಗ್ರಾಮದ ವೈದಿಕರಾದ ಶಂಕ್ರಯ್ಯ ಪರ್ವತಮಠ ಅವರನ್ನು ವಾದ್ಯ ಪರಿಕರದೊಂದಿಗೆ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.
ನಂತರ ಶಂಕ್ರಯ್ಯ ಪರ್ವತ ಮಠ ಹಾಗೂ ಬಾಬು ಸ್ವಾಮಿ ಕಾನೊಡೆ ಪಲ್ಲಕ್ಕಿಗೆ ಪೂಜೆ ನೆರವೇರಿಸಿ, ಆರತಿ ಬೆಳಗಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಚೌಗಲೆ ಮನೆ ಮುಂದೆ ಪಲ್ಲಕ್ಕಿ ಆಗಮಿಸಿದ ಬಳಿಕ ಶಂಕ್ರಯ್ಯ ಪರ್ವತ ಮಠ, ಸಿದ್ರಾಮಯ್ಯ ಕಾನೊಡೆ ಸೇರಿದಂತೆ ಅನೇಕರು ದೇವರ ಸ್ತೋತ್ರಗಳನ್ನು ಪಠಿಸಿ ಸುಸ್ತುರ ತಿವಿದುಕೊಂಡು ಭಕ್ತಿಯ ಪರಾಕಾಷ್ಟೆ ಮೆರೆದರು.ನಂತರ ಪಲ್ಲಕ್ಕಿ ಗ್ರಾಮದ ಹನುಮಂತನ ಮಂದಿರ ತಲುಪಿತು. ಬಸವೇಶ್ವರ ಮಂದಿರದ ಮುಂಭಾಗದಲ್ಲಿ ನಿರ್ಮಿಸಿದ ಅಗ್ನಿ ಕುಂಡಕ್ಕೆ ಉಭಯ ಸ್ವಾಮಿಗಳು ಪೂಜೆ ನೆರವೇರಿಸಿ, ಅಗ್ನಿ ತುಳಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುತ್ತಲಿನ ಗ್ರಾಮಗಳಾದ ಮಾಣಿಕೇಶ್ವರ, ಅಟ್ಟರ್ಗಾ, ಗುಂಜರಗಾ, ಬೋಳೆಗಾಂವ, ಅನಂದವಾಡಿ, ಇಂದ್ರಾಳ, ಲಾಸೋಣಾ, ಕಾಳಸರತುಗಾಂವ ವಾಡಿ, ಶಿವಣಿ, ಭಾಡಸಾಂಗವಿ, ತಮಗ್ಯಾಳ, ನಾರದ ಸಂಗಮ ಸೇರಿದಂತೆ ಅನೇಕ ಗ್ರಾಮ ಹಾಗೂ ನೆರೆ ರಾಜ್ಯ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಸಹಸ್ರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡರು.