ಗದಗ: ಪುಣ್ಯಕೋಟಿಗಳ ನೆಲೆ, ಸಂಗೀತ ಕಾಶಿಯೆಂದೇ ಖ್ಯಾತಿಯಾದ ಇಲ್ಲಿನ ವೀರೇಶ್ವರ ಪುಣ್ಯಾಶ್ರಮವು ಈಗ ಹಿಂದೆಂದೂ ಕಂಡಿರದಂತ ತೀವ್ರ ಗೊಂದಲ ಮತ್ತು ವಿವಾದಗಳ ಸುಳಿಯಲ್ಲಿ ಸಿಲುಕಿದೆ.
ಆಶ್ರಮದ ಒಳಾಡಳಿತದ ಗೊಂದಲದಿಂದ ಹಿಡಿದು, ಜೀವಬೆದರಿಕೆ ಆರೋಪಗಳು, ಕೋಮು ವಿವಾದದ ಕಿಡಿ, ಅಂತಿಮವಾಗಿ ಜಿಲ್ಲಾಡಳಿತದ ಹಸ್ತಕ್ಷೇಪಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಈ ಎಲ್ಲ ಬೆಳವಣಿಗೆಗಳು ಸಂಗೀತ ಕಾಶಿಯ ಕಳಸವಾಗಿದ್ದ ಆಶ್ರಮದ ಗೌರವ ನಲುಗುವಂತೆ ಮಾಡಿವೆ.ಈ ಗೊಂದಲಕ್ಕೆ ಕೋಮು ವಿವಾದದ ಆಯಾಮ ನೀಡಿರುವುದು ಆಶ್ರಮದ ತೇರಿನ ಗಾಲಿಯ ಮೇಲಿನ ಒಂದು ಬರಹ. ಈ ಗಾಲಿಯ ಮೇಲೆ ಅನ್ಯ ಕೋಮಿನ ಮಹಿಳೆಯ ಹೆಸರು ಹಾಕಲಾಗಿದೆ ಎಂದು ಹಿಂದೂ ಮುಖಂಡರು ಆರೋಪಿಸಿ, ಇದನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಆಗ್ರಹ ಮಾಡಿದ್ದರು. ಇದರ ಬೆನ್ನಲ್ಲಿಯೇ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸುದ್ದಿಗೋಷ್ಠಿ ನಡೆಸಿ, ಈ ಹೇಳಿಕೆಯನ್ನು ಖಂಡಿಸುವುದರ ಜತೆಗೆ ತಮಗೆ ಜೀವಭಯವಿದೆ ಎಂದು ಹೇಳಿರುವುದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಈ ಗೊಂದಲದ ಪ್ರಮುಖ ತಿರುವು ಎಂದರೆ, ಆಶ್ರಮದ ಕಲ್ಲಯ್ಯಜ್ಜನವರ ಟ್ರಸ್ಟಿಗಳ ವಿರುದ್ಧ ಜೀವಬೆದರಿಕೆ ಆರೋಪ. ಆಶ್ರಮದ ಒಳಗೆ ನಡೆಯುತ್ತಿರುವ ವಿದ್ಯಮಾನಗಳು ಸರಿಯಾಗಿಲ್ಲ, ಇಲ್ಲಿ ಸಾಕಷ್ಟು ಹಣಕಾಸಿನ ಮತ್ತು ಆಸ್ತಿ ವಿಷಯದಲ್ಲಿ ಗೊಂದಲಗಳಿವೆ ಎನ್ನುವುದು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಯಿತು.ಇದು ರಾಜ್ಯಾದ್ಯಂತ ತೀವ್ರ ಸಂಚಲಕ್ಕೆ ಕಾರಣವಾಗಿದೆ. ನನಗೆ ಜೀವಬೆದರಿಕೆ ಹಾಕಿದ 6 ಜನರ ಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದು, ಕೂಡಾ ರಾಜ್ಯವೇ ಗದಗನತ್ತ ಹೊರಳಿ ನೋಡುವಂತೆ ಮಾಡಿತ್ತು.
ಇದೆಲ್ಲರ ಮಧ್ಯೆ ಜೀವ ಬೆದರಿಕೆ ಆರೋಪ ಎದುರಿಸುತ್ತಿರುವ 6 ಜನ ಟ್ರಸ್ಟಿಗಳು ಸುದ್ದಿಗೋಷ್ಠಿ ನಡೆಸಿ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿ, ನಾವು ಯಾರಿಗೆ ಯಾವಾಗ ಜೀವ ಬೆದರಿಕೆ ಹಾಕಿದ್ದೇವೆ. ಈ ಆರೋಪದ ಹಿಂದೆ ಕಾಣದ ಕೈಗಳಿವೆ, ತಮ್ಮ ವಿರುದ್ಧದ ಮಾಡಿರುವ ಜೀವ ಬೆದರಿಕೆಯ ಆರೋಪವನ್ನು ಸಾಬೀತುಪಡಿಸಲು ಅವರು ಸವಾಲು ಹಾಕಿದ್ದಾರೆ. ಈ ವಿವಾದ ಆರೋಪ, ಪ್ರತ್ಯಾರೋಪಗಳ ಸರಣಿಯನ್ನು ಹುಟ್ಟುಹಾಕಿದ್ದು, ವಿಷಯವು ಇನ್ನಷ್ಟು ಗೊಂದಲಮಯವಾಗುವಂತೆ ಮಾಡಿದೆ.
ವೀರೇಶ್ವರ ಪುಣ್ಯಾಶ್ರಮದ ಈ ಗೊಂದಲಗಳು ಗದಗ ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನವನ್ನು ಮೂಡಿಸಿವೆ. ಆಶ್ರಮದಂತಹ ಪವಿತ್ರ ಸ್ಥಳವು ಈ ರೀತಿಯ ವಿವಾದಗಳಿಗೆ ಕಾರಣವಾಗಿರುವುದು ಅತ್ಯಂತ ದುರದೃಷ್ಟಕರ. ಆಶ್ರಮದ ಗೌರವ, ಸಂಗೀತ ಕಾಶಿಯ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎನ್ನುತ್ತಾರೆ ಅಪಾರ ಸಂಖ್ಯೆಯ ಭಕ್ತರು.ಇಂದು ಪ್ರತಿಭಟನೆ
ಈ ಎಲ್ಲ ಗೊಂದಲಗಳ ಮಧ್ಯೆ, ಆಶ್ರಮದ ಗೌರವ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಲು ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಜೂ. 29ರಂದು ಬೆಳಗ್ಗೆ 11ಕ್ಕೆ ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಶ್ರಮದ ಗೊಂದಲಗಳಿಗೆ ಮುಕ್ತಿ ಹಾಡಲು ಮತ್ತು ಸಂಗೀತ ಕಾಶಿಯ ಅಸ್ಮಿತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಲಿದ್ದಾರೆ.