ಸಸ್ಯಾಹಾರ ಪದ್ಧತಿ ಶ್ರೇಷ್ಠ: ಸ್ವರ್ಣವಲ್ಲೀ ಸ್ವಾಮೀಜಿ

| Published : Mar 23 2024, 01:09 AM IST

ಸಾರಾಂಶ

ಬದಲಾದ ಇಂದಿನ ಕಾಲದಲ್ಲಿ ಅನೇಕರು ವಿವೇಚನೆ ತೊರೆದು ತಮ್ಮ ಆಹಾರ ಪದ್ಧತಿಯಲ್ಲಿ ಕೊಲೆಸ್ಟ್ರಾಲ್ ಸೇವಿಸುತ್ತಿರುವ ಕಾರಣದಿಂದಾಗಿ ಅನೇಕ ರೋಗ- ರುಜಿನಗಳಿಗೆ ಕಾರಣವಾಗಿದೆ.

ಯಲ್ಲಾಪುರ: ಧರ್ಮಾಚರಣೆಯೇ ಪ್ರಸ್ತುತ ಕಾಲಮಾನದ ಅನಿವಾರ್ಯ ಅಗತ್ಯವಾಗಿದ್ದು, ಧರ್ಮ ಅನುಷ್ಠಾನಕ್ಕೆ ತೊಡಗುವವರು ಕಡ್ಡಾಯವಾಗಿ ಆಹಾರ ನಿಯಮವನ್ನು ಅನುಸರಿಸುವುದು ಅತ್ಯಂತ ಪ್ರಮುಖವಾದದ್ದು ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ತಾಲೂಕಿನ ತುಂಬೇಬೀಡಿನಲ್ಲಿ ಮಾ. ೨೧ರಂದು ಮಹಾಗಣಪತಿ ದೇವರು, ಸದಾಶಿವ ದೇವರು ಹಾಗೂ ಹನುಮಂತ ದೇವರ ದೇವಸ್ಥಾನ ಟ್ರಸ್ಟ್ ಹಮ್ಮಿಕೊಂಡಿದ್ದ ವಾರ್ಷಿಕ ದೇವತಾ ಕಾರ್ಯ ಹಾಗೂ ಸೀಮಾ ಭಿಕ್ಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಸಾಧಕರನ್ನು ಸಂಘಟನೆಯ ಪರವಾಗಿ ಸನ್ಮಾನಿಸಿ, ಆಶೀರ್ವಚನ ನೀಡಿದರು.

ಬದಲಾದ ಇಂದಿನ ಕಾಲದಲ್ಲಿ ಅನೇಕರು ವಿವೇಚನೆ ತೊರೆದು ತಮ್ಮ ಆಹಾರ ಪದ್ಧತಿಯಲ್ಲಿ ಕೊಲೆಸ್ಟ್ರಾಲ್ ಸೇವಿಸುತ್ತಿರುವ ಕಾರಣದಿಂದಾಗಿ ಅನೇಕ ರೋಗ- ರುಜಿನಗಳಿಗೆ ಕಾರಣವಾಗಿದೆ. ಸಸ್ಯಾಹಾರ ಆಹಾರ ಪದ್ಧತಿ ಇಂತಹ ಸಂಭವನೀಯ ಅಪಾಯಗಳಿಗೆ ಉತ್ತಮವಾಗಿದ್ದು, ರುಚಿಕಟ್ಟಾಗಿಯೂ ಇರುತ್ತದೆ. ಈ ಕುರಿತು ಪ್ರತಿಯೊಬ್ಬರೂ ಮತ್ತಷ್ಟು ಅರಿವು ಮೂಡಿಸಿಕೊಂಡು ತಮ್ಮ ಆರೋಗ್ಯದ ಕುರಿತಾಗಿ ಚಿಂತಿಸಬೇಕು ಎಂದರು.

ಇತ್ತೀಚೆಗೆ ಮಠದಲ್ಲಿ ನಡೆದ ಶಿಷ್ಯ ಸ್ವೀಕಾರ ಕಾರ್ಯಕ್ರಮ ಐತಿಹಾಸಿಕವಾಗಿ ಯಶಸ್ವಿಯಾಗಲು ಶ್ರೀಮಠದ ದಿವ್ಯಶಕ್ತಿಯೇ ಪ್ರಮುಖ ಕಾರಣವಾಗಿದೆ. ಶಿಷ್ಯರು ನೀಡಿದ ಸಹಕಾರದಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆದಿದೆ ಎಂಬುದು ನಮ್ಮೆಲ್ಲರನ್ನು ಸಂತಸಗೊಳಿಸಿದೆ. ಇತ್ತೀಚೆಗೆ ಧರ್ಮದ ಕುರಿತಾಗಿ ಜನರ ಒಲುಮೆ- ನಿಲುಮೆ ತುಸು ಕಡಿಮೆಯಾಗುತ್ತಿದ್ದು, ಮಠದ ಶಿಷ್ಯ ಸಂಘಟನೆ ಮತ್ತು ಮಾರ್ಗದರ್ಶನ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಈ ಕುರಿತಾದ ನಮ್ಮ ಇಂಗಿತಕ್ಕೆ ಶಿಷ್ಯಸ್ವೀಕಾರ ಕಾರ್ಯಕ್ರಮ ಅತ್ಯಂತ ಸುವ್ಯವಸ್ಥಿತವಾಗಿ ನಡೆದಿರುವುದೇ ಸಾಕ್ಷಿಯಾಗಿದೆ ಎಂದರು.

ಮನಸ್ಸನ್ನು ತುಂಬುವ ಬೀಡಾಗಿರುವ ತುಂಬೇಬೀಡು, ಶಿವನ ಕ್ಷೇತ್ರವಾಗಿದ್ದು, ನಮ್ಮೊಳಗಿನ ಸಣ್ಣ ಮನಸ್ಸನ್ನು ಬಿಡುಗಡೆಗೊಳಿಸುವ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಪ್ರತಿವರ್ಷದ ಪರಂಪರೆಯಂತೆ ಸಾಧಕರಾದ ತಾಳಮದ್ದಲೆ ಅರ್ಥಧಾರಿ ಆರ್. ಶ್ರೀನಿವಾಸ ರಾವ್ ಕಂಚೀಕೊಪ್ಪ ಮತ್ತು ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪಿ.ಎನ್. ಶಾಸ್ತ್ರಿ ಅವರನ್ನು ಸನ್ಮಾನಿಸಲಾಗಿದ್ದು, ಅವರಿಗೆ ದೇವರು ಒಳ್ಳೆಯದನ್ನು ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಹಿತ್ಲಳ್ಳಿಯ ಜ್ಯೋತಿಷ್ಯಾಚಾರ್ಯ ಡಾ. ನಾಗೇಂದ್ರ ಭಟ್ಟ ರಚಿಸಿದ ವನಸ್ಪತಿ ಸಸ್ಯಗಳ ಮಾಹಿತಿ ನೀಡುವ ಸಚಿತ್ರ ಪವಿತ್ರವನ ನಿರ್ಮಾಣ ಎಂಬ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.

ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿದ ಶ್ರೀಗಳ ಉಪಸ್ಥಿತಿಯಲ್ಲಿ ಮಹಾರುದ್ರ ಹವನ, ವೇದಪಾರಾಯಣದ ಮುಕ್ತಾಯ, ಮಾತೆಯರಿಂದ ಕುಂಕುಮಾರ್ಚನೆ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ವೈದಿಕರು ವಿಧ್ಯುಕ್ತವಾಗಿ ನೆರವೇರಿಸಿದರು.

ವೈದಿಕ ಪರಿಷತ್ ಅಧ್ಯಕ್ಷ ವೆಂಕಟರಮಣ ಭಟ್ಟ ಭರಣಿ, ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಸೀಮಾ ಭಾಗೀ ಅಧ್ಯಕ್ಷ ಎಂ.ಕೆ. ಹೆಗಡೆ ಚಿಪಗೇರಿ, ಹವ್ಯಕ ಜಾಗೃತಿ ಪಡೆ ಸಂಚಾಲಕ ಗಣಪತಿ ಶಂಕರಗದ್ದೆ, ಮುಂತಾದವರು ಉಪಸ್ಥಿತರಿದ್ದರು.

ಸೀಮಾ ವೈದಿಕ ಪರಿಷತ್ತಿನ ವೈದಿಕರು ಪಠಿಸಿದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಿರ್ವಹಿಸಿದ ಎಂ.ಕೆ. ಭಟ್ಟ ಯಡಳ್ಳಿ ವಂದಿಸಿದರು. ಪ್ರವೀಣ ಭಟ್ಟ ಭರಣಿ, ಎನ್.ಜಿ. ಹೆಗಡೆ ಭಟ್ರಕೇರಿ ಸನ್ಮಾನ ಪತ್ರ ವಾಚಿಸಿದರು.