ಅಪಘಾತಗಳಾದ ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ವ್ಯಕ್ತಿ ತನ್ನ ಸ್ವಂತ ಹಣದಲ್ಲಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕಾಗುತ್ತದೆ. ವಿಮೆ ಹಾಗೂ ಚಾಲನಾ ಪರವಾನಗಿ ಇದ್ದರೆ ವಿಮೆ ಕಂಪೆನಿಗಳೇ ಪರಿಹಾರದ ಹಣವನ್ನು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಭರಿಸಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಗಿ ಹಾಗೂ ವಿಮೆ ಹೊಂದಿ ಸಂಚಾರಿ ನಿಯಮ ಪಾಲಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್.ಡಿ.ಶ್ರೀಧರ್ ಹೇಳಿದರು.

ತಾಲೂಕಿನ ಎಲೆಕೆರೆ ಪಿಎಂಶ್ರೀ ಆದರ್ಶ ವಿದ್ಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪಿಎಂಶ್ರೀ ಆದರ್ಶ ವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪಘಾತಗಳಾದ ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ವ್ಯಕ್ತಿ ತನ್ನ ಸ್ವಂತ ಹಣದಲ್ಲಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕಾಗುತ್ತದೆ. ವಿಮೆ ಹಾಗೂ ಚಾಲನಾ ಪರವಾನಗಿ ಇದ್ದರೆ ವಿಮೆ ಕಂಪೆನಿಗಳೇ ಪರಿಹಾರದ ಹಣವನ್ನು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಭರಿಸಲಿದೆ ಎಂದರು.

ನ್ಯಾಯಾಲಯಗಳಲ್ಲಿ ಎಷ್ಟೋ ಪ್ರಕರಣಗಳಲ್ಲಿ ವಿಮೆ ಹೊಂದಿಲ್ಲದ ಕಾರಣದಿಂದ ಸ್ವಂತ ಹಣದಲ್ಲಿ ಪರಿಹಾರ ಕೊಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಅಪಘಾತ ಮಾಡಿದ ವ್ಯಕ್ತಿ ಪರಿಹಾರ ಹಣ ನೀಡಲು ಆಸ್ತಿ, ಮನೆ, ಮಠಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕಡ್ಡಾಯವಾಗಿ ವಾಹನ ಚಾಲಕರು ವಿಮೆ ಹಾಗೂ ಚಾಲನಾ ಪರವಾನಗಿ ಹೊಂದಬೇಕಿದೆ ಎಂದರು.

ಶಾಲಾ ಮಕ್ಕಳಿಗೆ ಕಾನೂನಿನ ಅರಿವಿನ ಅಗತ್ಯತೆ ಇದೆ. ಜತೆಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯ ಕಾಯ್ದೆಗಳ ಬಗ್ಗೆಯೂ ತಿಳಿವಳಿಕೆ ಇರಬೇಕಿದೆ. ಐದು ಲಕ್ಷ ರು. ವಾರ್ಷಿಕ ಆದಾಯ ಹೊಂದಿರುವವರಿಗೆ, ಪ್ರಕೃತಿ ವಿಕೋಪಕ್ಕೆ ಒಳಗಾದ ಕುಟುಂಬ ವರ್ಗದವರಿಗೆ ಹಾಗೂ ಸಾಮೂಹಿಕ ಅಪಘಾತಕ್ಕೊಳಗಾದ ಕುಟುಂಬ ವರ್ಗದವರಿಗೆ ಹಾಗೂ ಮಕ್ಕಳು, ಮಹಿಳೆಯರು, ಅಂಗವಿಕಲರಿಗೆ ಉಚಿತ ಕಾನೂನಿನ ನೆರವು, ಅರಿವು ಒದಗಿಸಲಾಗುತ್ತದೆ ಎಂದರು.

ಸಮಾರಂಭದಲ್ಲಿ ಪಿಎಂಶ್ರೀ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್ ಮೋಹನ್ ಕುಮಾರ್, ಆದರ್ಶ ವಿದ್ಯಾಲಯದ ಶಿಕ್ಷಕ ಚಲುವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.