ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟಿಯಲ್ಲಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಭೂಕುಸಿತ ಉಂಟಾಗಿದ್ದು, ಈ ಕಾಮಗಾರಿಯೂ ಪೂರ್ಣಗೊಳ್ಳುವರೆಗೆ ಈ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಉಡುಪಿ: ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟಿಯಲ್ಲಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಭೂಕುಸಿತ ಉಂಟಾಗಿದ್ದು, ಈ ಕಾಮಗಾರಿಯೂ ಪೂರ್ಣಗೊಳ್ಳುವರೆಗೆ ಈ ಘಾಟಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಏ. 9 ರಂದು ಈ ಘಾಟಿಯಲ್ಲಿ ತಡೆಗೋಡೆ - ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಿದ್ದಾಗ ಸುಮಾರು 12 ಮೀಟರ್ ಎತ್ತರದಲ್ಲಿ ಹಾಲಿ ಇರುವ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂ ಕುಸಿತ ಉಂಟಾಗಿ, ಕಾಂಕ್ರೀಟ್ ರಸ್ತೆಯ ಮೇಲ್ಮೈನಲ್ಲಿ ಬಿರುಕುಗಳು ಕಂಡುಬಂದಿವೆ, ಆದ್ದರಿಂದ ಪ್ರಸ್ತುತ ಕೈಗೊಳ್ಳುತ್ತಿರುವ ರಕ್ಷಣಾತ್ಮಕ ಕಾಮಗಾರಿಯ ಪೂರ್ಣಗೊಳ್ಳುವವರೆಗೆ, ಸಾರ್ವಜನಿಕ ಹಿತದೃಷ್ಟಿಯಿಂದ ತೀರ್ಥಹಳ್ಳಿ - ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್‌ನ ಮೂಲಕ ಎಲ್ಲ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪರ್ಯಾಯವಾಗಿ, ರಾಜ್ಯ ಹೆದ್ದಾರಿ 52 ರಸ್ತೆಯ ತೀರ್ಥಹಳ್ಳಿ - ರಾವೆ - ಕಾನುಗೋಡು - ಮಾಸ್ತಿಕಟ್ಟೆ - ಹುಲಿಕಲ್ ಘಾಟ್ - ಹೊಸಂಗಡಿ - ಸಿದ್ದಾಪುರ ಮೂಲಕ ಕುಂದಾಪುರ ನಡುವೆ ಸಂಚರಿಸುವ ವಾಹನಗಳು ತೀರ್ಥಹಳ್ಳಿ - ರಾವೆ - ಕಾನುಗೋಡು - ನಗರ - ಕೊಲ್ಲೂರು - ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.

ತೀರ್ಥಹಳ್ಳಿ - ಯಡೂರು- ಸುಳುಗೋಡು - ಮಾಸ್ತಿಕಟ್ಟೆ - ಹುಲಿಕಲ್ ಘಾಟ್ - ಹೊಸಂಗಡಿ - ಸಿದ್ದಾಪುರ - ಕುಂದಾಪುರ ನಡುವೆ ಸಂಚರಿಸುವ ವಾಹನಗಳು ತೀರ್ಥಹಳ್ಳಿ - ಯಡೂರು - ಮಾಸ್ತಿಕಟ್ಟೆ - ಕಾನುಗೋಡು - ನಗರ - ಕೊಲ್ಲೂರು - ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು. ಶಿವಮೊಗ್ಗ / ಸಾಗರ ಕಡೆಯಿಂದ ಹೊಸನಗರ - ನಗರ- ಮಾಸ್ತಿಕಟ್ಟೆ - ಹುಲಿಕಲ್ ಘಾಟ್ - ಹೊಸಂಗಡಿ - ಸಿದ್ಧಾಪುರ ಮೂಲಕ ಕುಂದಾಪುರ ನಡುವೆ ಸಂಚರಿಸುವ ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರದಿಂದ - ಭಟ್ಕಳ - ಬೈಂದೂರು ಕುಂದಾಪುರ ರಸ್ತೆಯಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.