ಸಂತೆ ದಿನ ವಾಹನ ಸಂಚಾರಕ್ಕೆ ತೊಡಕು: ಗ್ರಾ.ಪಂ.ಗೆ ದೂರು

| Published : Jul 07 2024, 01:15 AM IST

ಸಾರಾಂಶ

ರಸ್ತೆ ಬದಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುವುದರಿಂದ ಜನ ಸಾಮಾನ್ಯರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಬಗ್ಗೆ ಸಾರ್ವಜನಿಕರು ಗ್ರಾ.ಪಂ.ಗೆ ದೂರು ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಾದಾಪುರದಲ್ಲಿ ಶನಿವಾರ ಸಂತೆ ದಿನ. ಬೇರೆಡೆಯಿಂದ ಬಂದ ವರ್ತಕರು ಮಾರ್ಕೆಟ್ ರಸ್ತೆ ಬದಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುವುದರಿಂದ ಜನ ಸಾಮಾನ್ಯರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರ ಬಗ್ಗೆ ಸಾರ್ವಜನಿಕರು ಗ್ರಾ.ಪಂ.ಗೆ ದೂರು ಸಲ್ಲಿಸಿದ್ದಾರೆ.

ದೂರದ ಸೂರ್ಲಬ್ಬಿ, ಗರ್ವಾಲೆ, ಹಟ್ಟಿಹೊಳೆ, ಹಾಲೇರಿ ಹಾಗೂ ಜಂಬೂರು ಗ್ರಾಮದಿಂದ ನಿತ್ಯೋಪಯೋಗಿ ಸಾಮಗ್ರಿ ಖರೀದಿಸಲು ಜನ ಸಾಮಾನ್ಯರು ಆಗಮಿಸುತ್ತಾರೆ. ಈ ಹಿನ್ನೆಲೆ ಶನಿವಾರ ಮಾದಾಪುರ ಗ್ರಾ. ಪಂ. ಪಿಡಿಓ ಬಾಲಕೃಷ್ಣ ರೈ, ಕಾರ್ಯದರ್ಶಿ ಅನಿತಾ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್‌ ಭಾವೆ, ಸದಸ್ಯರಾದ ಪಿ.ಡಿ.ಅಂತೋಣಿ, ಕೆ.ಎ.ಲತೀಫ್ ಅವರು ಆಗಮಿಸಿ ರಸ್ತೆ ಬದಿ ಅಂಗಡಿಯಿಟ್ಟ ವರ್ತಕರಲ್ಲಿ ಮಾರುಕಟ್ಟೆ ಆವರಣದಲ್ಲಿ ಮುಂದಿನ ವಾರದಿಂದ ಅಂಗಡಿ ತೆರೆಯಬೇಕು ಎಂದು ತಾಕೀತು ಮಾಡಿದರು. ಮಾದಾಪುರ ಮಾರುಕಟ್ಟೆ ವಿಶಾಲವಾಗಿದ್ದು, ಅಂಗಡಿ ಇಡಲು ಸ್ಥಳಾವಕಾಶವಿದ್ದರೂ, ವರ್ತಕರು ರಸ್ತೆ ಬದಿ ಅಂಗಡಿ ತೆರೆಯುವುದರಿಂದ ಜನರಿಗೆ ತೊಂದರೆಯಾಗುವುದನ್ನು ಸದಸ್ಯ ಲತೀಫ್ ವರ್ತಕರ ಗಮನಕ್ಕೆ ತಂದರು.

ಸುಂಕ ವಸೂಲಿ ಗುತ್ತಿಗೆ ಪಡೆದವರು ರಶೀದಿ ಕೊಡುತ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳು ಸಬೂಬು ಹೇಳಿದರು. ರಶೀದಿ ಕೊಡುವಂತೆ ಪಿಡಿಓ ಹಾಗೂ ಪೊಲೀಸ್ ಪೇದೆ ಅಬ್ದುಲ್ ರಹೆಮಾನ್ ಸುಂಕ ವಸೂಲಿಗಾರರಿಗೆ ಸೂಚಿಸಿದರು.

ಇದೇ ಸಂದರ್ಭ ಮಾದಾಪುರ ಮಾರುಕಟ್ಟೆ ರಸ್ತೆಯಲ್ಲಿ ಅಂಗಡಿ ವಾಣಿಜ್ಯ ಮಳಿಗೆ ನಿರ್ಮಿಸಿದವರು ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿದ ಪಂಚಾಯಿತಿ ಆಡಳಿತ ಮಂಡಳಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು ಒತ್ತುವರಿಯಾದ ರಸ್ತೆ ಜಾಗವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.