ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಾಯೋಗಿ ವೇಮನರ ತತ್ವಗಳು ಬದುಕಿನ ಮಂತ್ರಗಳಾಗಿದ್ದು, ಸುಖ, ಶಾಂತಿ, ನೆಮ್ಮದಿಯ ಸೂತ್ರಗಳು ಅವರ ಪದ್ಯಗಳಲ್ಲಿ ಅಡಗಿವೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ನಗರದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನರ 172ನೇ ಮಾಸಿಕ ತತ್ವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇಮನರು ನೀಡಿರುವ ನೆಮ್ಮದಿಯ ಬದುಕಿನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.ವೇಮನರ ಪದ್ಯಗಳಲ್ಲಿ ಲೌಕಿಕ, ಪಾರಮಾರ್ಥಿಕ, ಆಧ್ಯಾತ್ಮಿಕ ವಿಷಯಗಳು ಸೇರಿ ಮಾನವ ಬದುಕಿನ ಕುರಿತು ಚಿಂತನೆಗಳು ಅಡಗಿವೆ. ಅವುಗಳನ್ನು ಶ್ರದ್ಧೆಯಿಂದ ಪಠಣ ಮಾಡಿದರೇ ಸುಂದರ ಬದುಕಿನ ಸಾರ್ಥಕತೆ ಸಿಗುತ್ತದೆ. ಅವರ ಪದ್ಯಗಳಲ್ಲಿರುವ ಜ್ಞಾನ ನಮ್ಮನ್ನು ಜಾಗೃತಗೊಳಿಸಿ ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ಸಂತರು, ಮಹಾತ್ಮರ ಒಳ್ಳೆಯ ಮಾತುಗಳು ನಮ್ಮ ಬದುಕಿಗೆ ತಿರುವು ಕೊಡುವ ಶಕ್ತಿ ಹೊಂದಿರುತ್ತವೆ ಎಂದು ತಿಳಿಸಿದರು.ನಾವು ಮಾಡುವ ಸತ್ಕರ್ಮದ ಫಲ ನಮಗೆ ದೊರೆಯದೇ ಹೋದರೂ ನಮ್ಮ ಮುಂದಿನ ಸಂತತಿಗೆ ದೊರೆಯುತ್ತದೆ. ಅದಕ್ಕೆ ಮಹಾಯೋಗಿ ವೇಮನರು ದಾನ, ಧರ್ಮದ ಸತ್ಕಾರ್ಯಗಳನ್ನು ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಹೇಳಿದ್ದು, ಆ ದಿಸೆಯಲ್ಲಿ ಮನುಷ್ಯ ನಾನು ಎನ್ನುವ ಅಹಂಕಾರ, ನನ್ನದು ಎನ್ನುವ ಮಮಕಾರ ಬಿಟ್ಟು ಸತ್ಕರ್ಮದಲ್ಲಿ ಭಾಗಿಯಾಗಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ನಿವೃತ್ತ ಶಿಕ್ಷಕ ಎಸ್.ಎಸ್.ಹಳ್ಳೂರ ಮಾತನಾಡಿ, ಮಹಾಯೋಗಿ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು-ಕೀಳುಗಳನ್ನು ತಮ್ಮ ಸರಳ ಸಾಹಿತ್ಯದ ಮೂಲಕ ಧಿಕ್ಕರಿಸಿದವರು. ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರೊಬ್ಬ ಶ್ರೇಷ್ಠ ಸಮಾಜ ಸುಧಾರಕ. ಅವರ ಸಾಹಿತ್ಯ ಜನರ ಮನಸ್ಸಿಗೆ ಮುದ ನೀಡುತ್ತದೆಯಲ್ಲದೇ, ಸಂತಸದ ಬದುಕಿಗೆ ದಾರಿ ತೋರಿ ಸನ್ಮಾರ್ಗದ ನೀತಿಯನ್ನು ಹೇಳುತ್ತದೆ ಎಂದರು.ಚಿಕ್ಕಗಲಗಲಿಯ ಜನಾರ್ಧನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ಆಶೀರ್ವಚನ ನೀಡಿ, ಶ್ರೇಷ್ಠವಾಗಿರುವ ಮಾನವ ಜನ್ಮ ಸಾರ್ಥಕತೆ ಪಡೆಯಬೇಕಾದರೆ ಪ್ರತಿಯೊಬ್ಬರು ಪುಣ್ಯದ ಕಾರ್ಯಗಳನ್ನು ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಾಗಲಕೋಟೆ ನಗರಸಭೆ ನೂತನ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅವರನ್ನು ಸನ್ಮಾನಿಸಲಾಯಿತು. ಹೇಮ ವೇಮನ ಸದ್ಬೋಧನ ಪೀಠದ ನಿರ್ದೇಶಕ ಚಿನ್ನಪ್ಪ ಒಂಟಗೋಡಿ ಅಧ್ಯಕ್ಷತೆ ವಹಿಸಿದ್ದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ, ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ವಿಜಯಲಕ್ಷ್ಮೀ ರಾಮದುರ್ಗ ಇದ್ದರು.ಬೆನಕಟ್ಟಿಯ ಮಲ್ಲಮಾಂಬೆ ಭಜನಾ ಮಂಡಳಿಯವರು ವೇಮನರ ವಚನ ಪಠಣ ಮಾಡಿದರು. ಈಶ್ವರ ಕೋನಪ್ಪನವರ ಸ್ವಾಗತಿಸಿದರು. ರಮೇಶ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಬೆನಕಟ್ಟಿ ಹಾಗೂ ಪಾಂಡು ಸನ್ನಪ್ಪನವರ ನಿರೂಪಿಸಿದರು.