ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿನ ತಪ್ಪು, ದೋಷಗಳನ್ನು ಕವಿತೆ ಹಾಗೂ ವಚನಗಳ ಮೂಲಕ ಅವರ ವಿಚಾರದಾರೆಗಳನ್ನು ಸಮಾಜಕ್ಕೆ ನೀಡಿದ ಅನೇಕ ಮಹಾ ಪುರುಷರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾತಿಗಳನ್ನು ಮೀರಿ ಸಮಾಜದಲ್ಲಿ ಬದಲಾವಣೆಯನ್ನು ಮಾಡಿ, ಕ್ರಾಂತಿ ಮಾಡಿದ ಸತ್ಪುರುಷ ಮಹಾಯೋಗಿ ವೇಮನರು. ಹದಿನೈದನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ ಮಹಾಯೋಗಿ ವೇಮನರು. ಅವರ ವಚನಗಳು ಇಂದು ನಮಗೆ ದಾರಿದೀಪವಾಗಿವೆ. ಸುಮಾರು ೧೫ ಸಾವಿರ ಪದ್ಯಗಳನ್ನು ಬರೆದು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ. ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಹುಟ್ಟಿನಿಂದಲೇ ಎಲ್ಲರೂ ಸಮಾನರು ಎಂದು ಸಾರಿದ ವೇಮನರ ಬದುಕು ನಮಗೆ ಸ್ಪೂರ್ತಿಯಾಗಬೇಕು. ನಮ್ಮ ದೇಶ ಸಿರಿ ಸಂಪತ್ತನ್ನು ಹೊಂದಿದ ದೇಶ ಅದರೊಂದಿಗ ಹೃದಯ ಸಂಪತ್ತನ್ನು ಹೊಂದಿದೆ. ಡಾ.ಅಂಬೇಡ್ಕರ ಅವರು ದೇಶದಲ್ಲಿ ಅಶ್ಪೃಶ್ಯತೆ ಕುರಿತು ತಮ್ಮ ಜೀವನದ ಉದ್ದಕ್ಕೂ ಹೋರಾಡಿ ಎಲ್ಲರೂ ಒಂದೇ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾನ ನಾಯಕರಾಗಿದ್ದರು. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಶರಣರ, ಮಹಾಪುರುಷರ, ಸತ್ಪುರುಷರ ಮತ್ತು ದೇಶಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜಯಂತಿಗಳು ಈ ನಾಡಿನಲ್ಲಿ ಸಾಂಕೇತಿಕವಾಗದೆ ಹೃದಯಪೂರ್ವಕವಾಗಿ ಆಚರಿಸುವಂತಾಗಬೇಕು ಅಂದಾಗ ಮಾತ್ರ ಆ ಸಂದೇಶಗಳನ್ನು ಮನೆ ಮನಗಳಲ್ಲಿ ತಲುಪಿಸಲು ಸಾಧ್ಯ. ಎಲ್ಲ ಸಮುದಾಯದವರು ದೇವಾಲಯಗಳನ್ನು ಮಾತ್ರ ಕಟ್ಟದೆ ಧಾರ್ಮಿಕ ಭಾವನೆಗಳ ಜೊತೆಗೆ ಜೀವಂತ ದೇವಾಲಯವಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದಲ್ಲಿ ಎಲ್ಲ ಸಮುದಾಯದ ನಿಜವಾದ ದೇವರು ಎಲ್ಲ ಮಕ್ಕಳು ಓದಲಿಕ್ಕೆ ಸಾಧ್ಯ. ವೇಮನ ವಚನಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ ಹಾಗೂ ಅನುವಾದಿಸಿದ ಸಾಕಷ್ಟು ಸಮಯ ತೆಗೆದುಕೊಂಡ ದಿ.ಎಸ್.ಆರ್ ಪಾಟೀಲ್ ಹಾಗೂ ದಿ. ಕೆ.ಎಚ್ ಪಾಟೀಲ್ ಅವರು ವೇಮನರ ಕುರಿತು ಅಧ್ಯಯನ ಹಾಗೂ ಸಂಶೋಧನೆ ಮಾಡಿ ಜನೇವರಿ ೧೯ಕ್ಕೆ ವೇಮನ ಜಯಂತಿ ಆಚರಿಸುವಂತೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ಕಳೆ ೫ ವರ್ಷಗಳಿಂದ ಸರ್ಕಾರಿ ಜಯಂತಿಯಾಗಿ ಆಚರಿಸಲು ಕ್ರಮ ವಹಿಸಲಾಗುತ್ತಿದೆ. ಅವರನ್ನು ಸ್ಮರಿಸಬೇಕು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಮಹಾ ಯೋಗಿ ವೇಮನರು ಮೂಡನಂಬಿಕೆ, ಡಂಬಾಚಾರವನ್ನು ಸಮಾಜದಿಂದ ಕಿತ್ತೊಗೆದು, ಮೇಲು ಕೀಳು ಎನ್ನುವುದನ್ನು ಹೊಡೆದೊಡಿಸಿದ ಮಹಾನ ಯೋಗಿ. ವೇಮನರು ಸಮ ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಚರಿತ್ರೆಗಳನ್ನು ಬರೆದವರು ವೇಮನರು ನಮ್ಮ ದೇಶದ ಮಹಾನ ಸಾಕ್ರಟಿಸ್ ಆಗಿದ್ದರು ಎಂದು ಸ್ಮರಿಸಿದರು.ಶಿವಶರಣಪ್ಪ ಶಿರೂರು ವಿಶೇಷ ಉಪನ್ಯಾಸ ನೀಡಿದರು. ಹೇಮರಡ್ಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮುಖಂಡರಾದ ವಿ.ಸಿ.ನಾಗಠಾಣ, ಪಾಂಡು ಸಹುಕಾರ ದೊಡಮನಿ, ಬಸನಗೌಡ ಪಾಟೀಲ, ಎಸ್.ಎಚ್.ನಾಡಗೌಡ, ಕಂಠೀರವ ಕುಲ್ಲೋಳ್ಳಿ, ಮಹಾದೇವಿ ತೆಲಗಿ, ಸರೋಜಿನಿ ಚೌಧರಿ, ಸಂಗು ಸಜ್ಜನ, ಭೀಮರಾಯ ಜಿಗಜಿಣಗಿ, ವಿದ್ಯಾವತಿ ಅಂಕಲಗಿ, ದೇವೇಂದ್ರ ಮೀರೇಕರ, ಸೋಮನಗೌಡ ಕಲ್ಲೂರ ಮುಂತಾದವರು ಇದ್ದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ವಂದಿಸಿದರು. ಎಚ್.ಎ ಮಮದಾಪುರ ನಿರೂಪಿಸಿದರು.
ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಾಥಾ ಚಾಲನೆ ನೀಡಿದರು.