ಹೇಮಾವತಿ ಜಲಾಶಯ ನಿರ್ಮಾಣದಿಂದ ಜಮೀನು ಕಳೆದುಕೊಂಡ ಜಿಲ್ಲೆಯ 8,273 ಸಂತ್ರಸ್ತ ರೈತ ಕುಟುಂಬಗಳಿಗೆ ಸರ್ಕಾರ 1972ರಲ್ಲಿ ವಿವಿಧೆಡೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ಹಾಗೂ ಪಹಣಿಗಳನ್ನು ನೀಡಿದ್ದರೂ, 54 ವರ್ಷ ಕಳೆದರೂ ಪೋಡಿ ಹಾಗೂ ದುರಸ್ತಿ ಕಾರ್ಯ ಪೂರ್ಣಗೊಳ್ಳದಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಇನ್ನೂ ಆರು ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಆರ್. ಪಿ. ವೆಂಕಟೇಶಮೂರ್ತಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಹೇಮಾವತಿ ಜಲಾಶಯ ನಿರ್ಮಾಣದಿಂದ ಜಮೀನು ಕಳೆದುಕೊಂಡ ಜಿಲ್ಲೆಯ 8,273 ಸಂತ್ರಸ್ತ ರೈತ ಕುಟುಂಬಗಳಿಗೆ ಸರ್ಕಾರ 1972ರಲ್ಲಿ ವಿವಿಧೆಡೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ಹಾಗೂ ಪಹಣಿಗಳನ್ನು ನೀಡಿದ್ದರೂ, 54 ವರ್ಷ ಕಳೆದರೂ ಪೋಡಿ ಹಾಗೂ ದುರಸ್ತಿ ಕಾರ್ಯ ಪೂರ್ಣಗೊಳ್ಳದಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಇನ್ನೂ ಆರು ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಆರ್. ಪಿ. ವೆಂಕಟೇಶಮೂರ್ತಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಹೇಮಾವತಿ ಜಲಾಶಯ ಯೋಜನೆಗಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಸರ್ಕಾರವೇ ಜಮೀನು ಮಂಜೂರು ಮಾಡಿದೆ.ಸಂತ್ರಸ್ತರಿಗೆ ಸಾಗುವಳಿ ಚೀಟಿ ಹಾಗೂ ಪಹಣಿಗಳನ್ನು ವಿತರಿಸುವುದರ ಜೊತೆಗೆ ಅಂದೇ ಪೋಡಿ ಶುಲ್ಕವನ್ನೂ ಪಡೆದುಕೊಂಡಿದೆ. ಆದರೆ ಐದು ದಶಕಗಳಿಗೂ ಹೆಚ್ಚು ಕಾಲಕಳೆದರೂ ಜಮೀನಿನ ಪೋಡಿ ಕಾರ್ಯ ನಡೆಯದಿರುವುದು ನೋವಿನ ಸಂಗತಿ ಎಂದರು. ಹಾಸನ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಹೇಮಾವತಿ ಜಲಾಶಯ ಸಂತ್ರಸ್ತರ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹರಿಸುವ ಭರವಸೆ ನೀಡಿದ್ದರು. ಅದರಂತೆ ಪೋಡಿ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಹೇಮಾವತಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಸಂತ್ರಸ್ತರಿಗೆ ಸಂಬಂಧಿಸಿದ ದಾಖಲೆಗಳು ನೈಜತೆಯಿಂದ ಕೂಡಿಲ್ಲ ಎಂದು ವರದಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂಬ ಭಾವನೆ ಮೂಡಿದೆ ಎಂದು ಹೇಳಿದರು. ಹೇಮಾವತಿ ಜಲಾಶಯದಿಂದ ಜಮೀನು ಕಳೆದುಕೊಂಡ ರೈತರಿಗಾಗಿ ಸರ್ಕಾರವೇ ಜಮೀನು ಮೀಸಲಿಟ್ಟು, ಮಂಜೂರು ಮಾಡಿ, ಸಾಗುವಳಿ ಚೀಟಿ ಮತ್ತು ಪಹಣಿ ನೀಡಿ, ಅವರ ವಶಕ್ಕೆ ಜಮೀನು ನೀಡಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ದಾಖಲೆಗಳು ನೈಜವಾಗಿಲ್ಲ ಎಂದು ಅಧಿಕಾರಿಯೊಬ್ಬರು ವರದಿ ಮಾಡುವುದರಿಂದ ಸಮಸ್ಯೆ ಬಗೆಹರಿಯುವ ಬದಲು ಮತ್ತಷ್ಟು ಗೊಂದಲ ಸೃಷ್ಟಿಯಾಗುತ್ತದೆ ಎಂದು ಆಕ್ಷೇಪಿಸಿದರು.
ಹೇಮಾವತಿ ಯೋಜನೆಗಾಗಿ ಜಮೀನು ಕಳೆದುಕೊಂಡು, ಸರ್ಕಾರದಿಂದ ಪುನರ್ವಸತಿ ಜಮೀನು ಪಡೆದು 54 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ರೈತರ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಇಷ್ಟು ದೀರ್ಘಕಾಲ ಸಮಸ್ಯೆ ಬಾಕಿ ಉಳಿದಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಹೇಮಾವತಿ ಯೋಜನೆಗಾಗಿ ಮೀಸಲಿಟ್ಟ ಜಮೀನಿನಲ್ಲಿ ಅಕ್ರಮವಾಗಿ ನೆಲೆಸಿರುವವರು ಅಥವಾ ಸಂತ್ರಸ್ತರ ಹೆಸರಿನಲ್ಲಿ ಅಕ್ರಮವಾಗಿ ಜಮೀನು ಮಂಜೂರು ಮಾಡಿಸಿಕೊಂಡಿರುವವರು ಇದ್ದರೆ, ಅಂತಹ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಆದರೆ 1970ರ ದಶಕದಲ್ಲಿ ಹೇಮಾವತಿ ಯೋಜನೆಗಾಗಿ ಜಮೀನು ಕಳೆದುಕೊಂಡ ನೈಜ ಸಂತ್ರಸ್ತ ರೈತರ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದು ಸ್ಪಷ್ಟಪಡಿಸಿದರು.ಆರು ತಿಂಗಳಲ್ಲಿ ಪೂರ್ಣಗೊಳಿಸಲು ಮನವಿ ಸೆ.5ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ `ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಸಂತ್ರಸ್ತ ರೈತರ ಜಮೀನುಗಳ ದುರಸ್ತಿ ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ 54 ವರ್ಷಗಳಿಂದ ಕಾಯುತ್ತಿರುವ ರೈತರು ಇನ್ನೂ ಆರು ತಿಂಗಳು ಕಾಯಲು ಸಿದ್ಧರಿದ್ದಾರೆ. ಈ ಅವಧಿಯೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ ಎಂದರು.
ದುರಸ್ತಿ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿದ್ದರೆ ಹೆಚ್ಚುವರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಈ ವಿಚಾರಕ್ಕೆ ಮೊದಲ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿ ತಿಂಗಳು ಕನಿಷ್ಠ 10 ಹೇಮಾವತಿ ಯೋಜನೆಯ ಪುನರ್ವಸತಿ ಗ್ರಾಮಗಳಲ್ಲಿ ಜಮೀನುಗಳ ಪೋಡಿ ಹಾಗೂ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಆರು ತಿಂಗಳಲ್ಲಿ ಸಂಪೂರ್ಣ ಕಾರ್ಯ ಮುಗಿಸಬೇಕು. ಈ ಮೂಲಕ ದಶಕಗಳ ಸಮಸ್ಯೆಗೆ ಅಂತ್ಯ ಹಾಡಿ ಸಂತ್ರಸ್ತ ರೈತರಿಗೆ ಅವರ ಜಮೀನಿನ ಸ್ಪಷ್ಟ ಹಕ್ಕು ದೊರಕಿಸಬೇಕು ಎಂದು ಆರ್.ಪಿ. ವೆಂಕಟೇಶಮೂರ್ತಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಂಟಿ ಕಾರ್ಯದರ್ಶಿ ಡಿ.ಎಸ್. ಲೋಕೇಶ್, ಖಜಾಂಚಿ ಎಂ.ಇ. ಚಂದ್ರಶೇಖರ್, ಸದಸ್ಯರಾದ ಡಿ.ಆರ್. ಜಯರಾಮ್, ಎಸ್.ಆರ್. ಬಸವರಾಜು, ಎಂ.ವಿ. ರಾಜೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.