ನಿರ್ವಹಣೆಯಿಲ್ಲದೆ ಅವನತಿಯತ್ತ ವೆಂಕಟೇಶ್ವರ ಕಲಾಭವನ

| Published : Feb 04 2024, 01:30 AM IST

ಸಾರಾಂಶ

ನಿರ್ವಹಣೆಯಿಲ್ಲದೆ ಅವನತಿಯತ್ತ ಸಾಗುತ್ತಿರುವ ವೆಂಕಟೇಶ್ವರ ಕಲಾಭವನವನ್ನು ಸೂಕ್ತ ನಿರ್ವಹಣೆ ಮಾಡುವಂತೆ ಸಾರ್ವಜನಿಕರ ಒತ್ತಾಯ

ಕನ್ನಡಪ್ರಭ ವಾರ್ತೆ ಅರಸೀಕೆರೆನಗರದ ಹೃದಯ ಭಾಗದಲ್ಲಿದಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನ ಹಿಂದೆ ಚಲನಚಿತ್ರಮಂದಿರವಾಗಿ ಹೆಚ್ಚು ಕನ್ನಡ ಚಿತ್ರವನ್ನೇ ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಉತ್ತಮ ಆದಾಯ ತಂದುಕೊಡುತ್ತಿದ್ದ ಈ ಚಿತ್ರಮಂದಿರವನ್ನು ಕಲಾಭವನವನ್ನಾಗಿ ಮಾರ್ಪಡಿಸಿ ೧೫ ವರ್ಷಗಳೆ ಕಳೆಯುತ್ತಾ ಬಂದಿದೆ. ಈವರೆಗೆ ಬೆರಳೆಣಿಕೆಯಲ್ಲಿ ಕಾರ್ಯಕ್ರಮಗಳು ಮಾತ್ರ ನಡೆದಿದ್ದು ಕೋಟ್ಯಾಂತರ ರು. ಬೆಲೆ ಬಾಳುವ ಈ ಆಸ್ತಿಯಲ್ಲಿ ಕಾವಲುಗಾರನಿಗೆ ಸಂಬಳ ಕೊಡುವಷ್ಟು ಆದಾಯವೂ ಇಲ್ಲದೆ ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡ ಅವನತಿಯತ್ತ ಸಾಗಿ ದಿನಗಳನ್ನು ಎಣಿಸುತ್ತಿರುವುದು ದುರಂತದ ಸಂಗತಿ.

ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಅಮರಗಿರಿ ಮಾಲೇಕಲ್ ತಿರುಪತಿ ದೇವಾಲಯಕ್ಕೆ ಸೇರಿದ್ದ ಆಸ್ತಿಯಾಗಿದ್ದ ಈ ಕಲಾ ಭವನವನ್ನು ಈ ಹಿಂದೆ ಹಾಸನದ ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ನೀಡಲಾಗಿದ್ದು, ಹೆಚ್ಚಿನ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದರಿಂದ ನಿರ್ಮಾಪಕರುಗಳಿಗೆ ಉತ್ತಮ ಆದಾಯವನ್ನು ತಂದುಕೊಡುವ ಕೇಂದ್ರವಾಗಿತ್ತು. ಕಳೆದ ಹದಿನೆಂಟು ವರ್ಷಗಳ ಹಿಂದೆ ತಾಲೂಕು ಆಡಳಿತ ಕೋಟ್ಯಾಂತರ ರು.ಗಳ ಮೌಲ್ಯದ ಈ ಕಟ್ಟಡವನ್ನು ಮುಜರಾಯಿ ಇಲಾಖೆಯ ವಶಕ್ಕೆ ತೆಗೆದುಕೊಂಡಿದ್ದು ಈ ಚಲನ ಚಿತ್ರಮಂದಿರವನ್ನು ಕಲ್ಯಾಣ ಮಂದಿರ ಅಥವಾ ಸಾಂಸ್ಕೃತಿಕ ಕಲಾಭವನವನ್ನಾಗಿ ಅಭಿವೃದ್ಧಿ ಮಾಡಬೇಕೆಂಬ ತೀರ್ಮಾನಕ್ಕೆ ಬಂದ ಸಮಯದಲ್ಲಿ ಅನೇಕ ಕಲಾಸಕ್ತರು ನಗರದಲ್ಲಿ ಅನೇಕ ಕಲ್ಯಾಣ ಮಂದಿರಗಳು ಈಗಾಗಲೇ ಇದ್ದು, ಇನ್ನೂ ಅನೇಕ ಕಲ್ಯಾಣ ಮಂದಿರಗಳು ಹೊಸದಾಗಿ ನಿರ್ಮಾಣ ಆಗುವ ಸಾಧ್ಯತೆಗಳಿರುವ ಕಾರಣ ನಗರದ ಹೃದಯ ಭಾಗದಲ್ಲಿರುವ ಈ ಸುಂದರ ಕಟ್ಟಡವನ್ನು ಕಲಾಭವನ ಎಂದು ನವೀಕರಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಲಾಭವನವಾಗಿ ಮಾರ್ಪಡಿಸಲಾಯಿತಾದರೂ ಇದು ಯಾವುದೇ ಕಲಾವಿದರಿಗಾಗಲೀ ,ನಾಟಕ ಕಂಪನಿಗಳಿಗಾಗಲೀ ಸಹಕಾರಿಯಾಗದೇ ಸಣ್ಣ-ಪುಟ್ಟ ಸಾಲ ಕಾರ್ಯಕ್ರಮಗಳಿಗೆ ಸೀಮಿತವಾಗಿ ಆದಾಯವೇ ಇಲ್ಲದೆ ಕೋಟ್ಯಾಂತರ ರು. ಬೆಲೆ ಬಾಳುವ ಕಟ್ಟಡ ಅವನತಿಯತ್ತ ಸಾಗುತ್ತಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಕಲಾ ಭವನದ ಮುಂಭಾಗದ ಬಾಗಿಲುಗಳು ಸಂಪೂರ್ಣವಾಗಿ ನಿಷ್ಕ್ರೀಯಗೊಂಡಿದ್ದು, ನಿರ್ವಹಣೆಯಿಲ್ಲದ ಕಾರಣ ಕಟ್ಟಡ ಅಲ್ಲಲ್ಲೆ ಹಾಳಾಗಿದ್ದು, ಈಗಲಾದರೂ ಎಚ್ಚೆತ್ತು ಸೂಕ್ತ ನಿರ್ವಹಣೆ ಮಾಡಬೇಕಾಗಿದೆ. ಅಲ್ಲದೆ ಇದನ್ನು ಕಲಾ ಭವನವನ್ನಾಗಿಯೇ ಉಳಿಸಿಕೊಂಡು ಕಲಾವಿದರಿಗೆ ಮೊದಲ ಆದ್ಯತೆ ಕೊಡುವುದರೊಂದಿಗೆ ಇದು ವಿಶಾಲವಾದ ಜಾಗವನ್ನು ಹೊಂದಿರುವುದರಿಂದ ಊಟದ ಹಾಲ್ ಇನ್ನಿತರ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿ ಬಡ-ಬಗ್ಗರಿಗೆ ಕಡಿಮೆ ದರದಲ್ಲಿ ಶುಭಕಾರ್ಯಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ಈ ಕಟ್ಟಡ ಕಲಾ ಭವನವಾಗಿಯೂ ಉಳಿದು ಸರ್ಕಾರಕ್ಕೆ ಆದಾಯ ತಂದು ಕೊಡುವ ಮೂಲವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಅವಸಾನದತ್ತ ಸಾಗುತ್ತಿರುವ ಕಟ್ಟಡಕ್ಕೆ ಮರು ಜೀವ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.