ಹಗರಿಬೊಮ್ಮನಹಳ್ಳಿ: ಮಧ್ಯ ಕರ್ನಾಟಕದ ವೈಷ್ಣವ ಮತ ಪಂಥದ ಶ್ರದ್ಧಾ ಕೇಂದ್ರವಾಗಿರುವ ಪಟ್ಟಣದ ರಾಮನಗರದಲ್ಲಿ ನಾಡಿನ ಆರಾಧ್ಯ ದೈವವಾಗಿರುವ ವೆಂಕಟೇಶ್ವರ ೬೯ನೇ ವರ್ಷದ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.

ರಥೋತ್ಸವ ನಿಮಿತ್ತ ಸ್ವಾಮಿಯವರ ದೇವಸ್ಥಾನದಲ್ಲಿ ಮೂಲಿಮನಿ ಬದರಿನಾರಾಯಣ ಆಚಾರ್ ನೇತೃತ್ವದಲ್ಲಿ ಬೆಳಿಗ್ಗೆ ಅಭಿಷೇಕ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆಯೇ ಗೋವಿಂದ ಗೋವಿಂದಾ ಎಂದು ಸದ್ಭಕ್ತರ ಘೋಷಣೆಗಳು ಮೊಳಗಿದವು. ರಥ ಚಲಿಸುತ್ತಿದ್ದಂತೆಯೇ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಅಸಂಖ್ಯಾತ ಭಕ್ತರು ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಮೆರೆದರು.

ಮಹಾದಾನಿಗಳಾದ ಗಂಗಾವತಿ ವೆಂಕೋಬಣ್ಣವರು ದಾನವಾಗಿ ನಿರ್ಮಿಸಿ ಕೊಟ್ಟ ರಥವನ್ನು ಇಂದಿಗೂ ಅವರ ಕುಟುಂಬವರೇ ಆದ ಗಂಗಾವತಿ ವಿಜಯಕುಮಾರ್ ಅವರ ಕುಟುಂಬದವರು ದೇವಸ್ಥಾನದ ಧರ್ಮಕರ್ತರ ಸಹಯೋಗದಲ್ಲಿ ಪ್ರತಿ ವರ್ಷ ಸಾಂಗೋಪಸಾಂಗವಾಗಿ ರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.

ಪಟ್ಟಣದ ಠಾಣೆಯ ಸಿಪಿಐ ವಿಕಾಸ್ ಲಮಾಣಿ ತಮ್ಮ ಪೊಲೀಸ್ ಪಡೆಯೊಂದಿಗೆ ಸೂಕ್ತ ಬಂದೋಬಸ್ತು ಕಲ್ಪಿಸಿದ್ದರು. ಪುರಸಭೆಯ ಅಧ್ಯಕ್ಷ ಮರಿರಾಮಣ್ಣನವರು ನೀರು ಮತ್ತು ಮಜ್ಜಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದರು. ಈಗಾಗಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಪ್ರತಿದಿನ ನಿಯಮಿತವಾಗಿ ಉಚಿತವಾಗಿ ಉಪಹಾರ ಒದಗಿಸುವ ಖ್ಯಾತಿ ಹೊಂದಿರುವ ಇಲ್ಲಿನ ಪ್ರಶಾಂತ ಹೋಟೆಲ್ ಮಾಲೀಕರಾದ ಗಂಗಾಧರಯ್ಯ ರಥೋತ್ಸವ ನಿಮಿತ್ತ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ಒದಗಿಸಿದ್ದು ವಿಶೇಷವಾಗಿತ್ತು.

ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲಿ ಶುಕ್ರವಾರ ಸಂಜೆ ವೆಂಕಟೇಶ್ವರ ಸ್ವಾಮಿಯವರ ರಥೋತ್ಸವ ನಡೆಯಿತು.


ಹಗರಿಬೊಮ್ಮನಹಳ್ಳಿಯಲ್ಲಿ ಶುಕ್ರವಾರ ನಡೆದ ರಥೋತ್ಸವ ನಿಮಿತ್ತ ಇಲ್ಲಿನ ಹೋಟೆಲ್ ಮಾಲಿಕರಾದ ಗಂಗಾಧರಯ್ಯ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ವಿತರಿಸಿದರು. ನಂದೀಪುರ ಮಹೇಶ್ವರ ಸ್ವಾಮೀಜಿ, ಸರ್ದಾರ್ ಯಮನೂರಪ್ಪ ಹಾಗೂ ಸಂಚಿ ಶಿವಕುಮಾರ್ ಮತ್ತಿತರರು ಇದ್ದಾರೆ.