ವೇಣೂರು ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ: ಸಿದ್ಧತಾ ಸಭೆ

| Published : Feb 08 2024, 01:32 AM IST

ಸಾರಾಂಶ

ಪೂರ್ವಸಿದ್ಧತಾ ಸಭೆಯು ಮಂಗಳವಾರ ಬೆಳ್ತಂಗಡಿಯ ಆಡಳಿತ ಸೌಧದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಜುಬೆನ್ ಮೊಹಪಾತ್ರರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಐತಿಹಾಸಿಕ ವೇಣೂರಿನ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭವಾಗಿದ್ದು, ಫೆ.22ರಿಂದ ಮಾರ್ಚ್ 1ರ ತನಕ ನಡೆಯಲಿರುವ ಈ ಪುಣ್ಯಕಾರ್ಯದ ಯಶಸ್ಸಿಗಾಗಿ ಪೂರ್ವಸಿದ್ಧತಾ ಸಭೆಯು ಮಂಗಳವಾರ ಬೆಳ್ತಂಗಡಿಯ ಆಡಳಿತ ಸೌಧದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಜುಬೆನ್ ಮೊಹಪಾತ್ರರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಎಲ್ಲ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದ ಸಹಾಯಕ ಆಯುಕ್ತರು, ಅಧಿಕಾರಿಗಳಿಗೆ ಅವರ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿದರು.

ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿ, ಅವರ ಹೆಸರು ಮತ್ತು ಮೊಬೈಲ್ ನಂಬರನ್ನು ತಾಲೂಕು ತಹಸೀಲ್ದಾರರಿಗೆ ನೀಡುವಂತೆ ಸೂಚಿಸಿದರು. ಮಹಾಮಸ್ತಕಾಭಿಷೇಕದ ಸಂದರ್ಭ ಬಾಹುಬಲಿ ಬೆಟ್ಟದಲ್ಲಿ ಇಲಾಖಾ ಅಧಿಕಾರಿಗಳಿಗಾಗಿ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯುವಂತೆ ಸೂಚಿಸಿದರು. ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸರ್ಕಾರದ ಕಡೆಯಿಂದ ಸರ್ವರೀತಿಯ ಸಹಕಾರ ನೀಡಲು ಹಾಗೂ ಎಲ್ಲೂ ಯಾವುದೇ ಪ್ರಮಾದವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಮಹಾಮಸ್ತಕಾಭಿಷೇಕದ ಸರ್ಕಾರದ ಪರವಾಗಿ ನೋಡೆಲ್ ಅಧಿಕಾರಿ ಮಾಣಿಕ್ಯ, ಸಹಾಯಕ ನೋಡಲ್ ಅಧಿಕಾರಿ ಡಾ. ಜಯಕೀರ್ತಿ, ಬೆಳ್ತಂಗಡಿಯ ತಹಸೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ತಾಲೂಕು ಪಂಚಾಯಿತಿಪ್ರಭಾರ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಮತ್ತಿತರರು ಪಾಲ್ಗೊಂಡರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಜಿನಿಯರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ, ಪೊಲೀಸ್ ಇಲಾಖೆಯ ಸಬ್‌ ಇನ್ಸ್‌ಪೆಕ್ಟರ್, ಅಗ್ನಿಶಾಮಕದಳ ಇಲಾಖೆಯ ಅಧಿಕಾರಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ, ಎಪಿಎಂಸಿಯ ಕಾರ್ಯದರ್ಶಿ, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ವೇಣೂರು ಕಂದಾಯ ನಿರೀಕ್ಷಕರು, ತಾಲೂಕು ಪಂಚಾಯತ್ ಕಛೇರಿ ವ್ಯವಸ್ಥಾಪಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.