ಸಾರಾಂಶ
ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ವಕ್ಫ್ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆ ಖಂಡಿಸಿ ಸೋಮವಾರ ಪ್ರತಿಭಟಿಸಿತು.
ರಾಯಚೂರು / ಸಿಂಧನೂರು
ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿಯನ್ನು ಕಬಳಿಸುತ್ತಿರುವ ಧೋರಣೆಯನ್ನು ಖಂಡಿಸಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಗೂ ಇದೇ ದಿನ ಸಿಂಧನೂರು ನಗರದ ಮಿನಿ ವಿಧಾನಸೌಧ ಕಚೇರಿಯಲ್ಲಿ ಸೋಮವಾರ ಪ್ರತ್ಯೇಕ ಪ್ರತಿಭಟನೆಯನ್ನು ನಡೆಸಲಾಯಿತು.ಹಾಲಕೇರಿ ಅನ್ನದಾನೇಶ್ವರ ಮಠದ 24 ಎಕರೆ, ಗದಗಿನ ತೋಂಟದಾರ್ಯ ಮಠದ 12 ಎಕರೆ ಹೀಗೆ ಹಿಂದೂ ಧರ್ಮದ ಮಠ, ಮಂದಿರಗಳ ಆಸ್ತಿಯನ್ನು ಪಹಣಿಯಲ್ಲಿ ವಕ್ಫ್ ಎಂದು ನೊಂದಾಯಿಸಿ, ದೌರ್ಜನ್ಯದಿಂದ ಪಡೆಯುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದೂರಿದರು.ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ನಮೂದಿಸಿರುವ ಎಲ್ಲ ಆಸ್ತಿಗಳನ್ನು ಮರಳಿ ಸಂಬಂಧಪಟ್ಟ ಮಾಲೀಕರಿಗೆ ಮರಳಿ ಹಸ್ತಾಂತರಿಸಬೇಕು. ಹಿಂದೂ ಸಮಾಜ ಹಾಗೂ ರೈತರನ್ನು ಲಗುವಾಗಿ ಕಂಡ ಸಚಿವ ಜಮೀರ್ ಅಹ್ಮದ್ರನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಬೇಕು. 1995 ಮತ್ತು 2013ರ ಅಂದಿನ ಕೇಂದ್ರ ಸರ್ಕಾರ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮಾಡಿ ದೇಶದಲ್ಲಿ ಸಂವಿಧಾನದ ಬದಲಾಗಿ ಷರಿಯಾ ಕಾನೂನನ್ನು ಹೇರುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಈಗಿನ ಕೇಂದ್ರ ಸರ್ಕಾರ ಆ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಮುಖಂಡ ಈರೇಶ ಇಲ್ಲೂರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು, ಮುಖಂಡರು ಸೇರಿ ಅನೇಕರು ಇದ್ದರು.