ಪಹಲ್ಗಾಮ್‌ ಘಟನೆ ಖಂಡಿಸಿ ವಿಎಚ್‌ಪಿ ಪ್ರತಿಭಟನೆ

| Published : Apr 26 2025, 12:51 AM IST

ಪಹಲ್ಗಾಮ್‌ ಘಟನೆ ಖಂಡಿಸಿ ವಿಎಚ್‌ಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಈ ಘೋರ ಹತ್ಯಕಾಂಡ ತೀವ್ರ ಖಂಡನೀಯ. ಎಷ್ಟೋ ಜನರನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾರೆ

ಹುಬ್ಬಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿ ಹಾಗೂ ಹಿಂದೂಗಳ ನರಮೇಧ ಖಂಡಿಸಿ ನಗರದಲ್ಲಿ ವಿಶ್ವ ಹಿಂದೂ ಪರಿಷದ್ ಹುಬ್ಬಳ್ಳಿ ಮಹಾನಗರದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಗುಡುಗು-ಸಿಡಿಲು, ಸುರಿಯುತ್ತಿರವ ಮಳೆಯನ್ನು ಲೆಕ್ಕಿಸದೆ ಸಮಾವೇಶಗೊಂಡ ಪ್ರತಿಭಟನಾಕಾರರು ಉಗ್ರಗಾಮಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪಾಕಿಸ್ತಾನ ಘೋಷಿತ ಇಸ್ಲಾಮಿಕ್ ಉಗ್ರಗಾಮಿಗಳಿಂದ ಹಿಂದೂಗಳ ಮೇಲೆ ನಡೆದ ದಾಳಿ ಹಾಗೂ ಹಿಂದೂಗಳ ನರಮೇಧ ನಡೆಸಲಾಗಿದೆ ಎಂದು ಖಂಡಿಸಿದರು.

ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಈ ಘೋರ ಹತ್ಯಕಾಂಡ ತೀವ್ರ ಖಂಡನೀಯ. ಎಷ್ಟೋ ಜನರನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾರೆ. ಪಾಕಿಸ್ತಾನದ ಕುಮ್ಮಕ್ಕು ಇಲ್ಲದೇ ಇದು ನಡೆಯಲು ಸಾಧ್ಯವಿಲ್ಲ. ಆ ದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದರು.

ಭಯೋತ್ಪಾದಕ ಕೃತ್ಯದ ವಿಚಾರವಾಗಿ ಹಿಂದೂ, ಮುಸ್ಲಿಮರ್‌ರನ್ನು ಬೇರ್ಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಮುಂದುವರಿದರೆ ದೇಶದಲ್ಲಿ ಮರಣ ಹೋಮವೇ ನಡೆಯಲಿದೆ. ದೇಶದಲ್ಲಿ ಬದುಕುವವರು ಭಾರತ ಮಾತೆಗೆ ಘೋಷಣೆ ಹಾಕಬೇಕು. ವಂದೇ ಮಾತರಂ ಎಂದು ಹೇಳಬೇಕು. ಇಲ್ಲವಾದಲ್ಲಿ ದೇಶ ಬಿಟ್ಟು ತೊಲಗಬೇಕು ಎಂದು ತಿಳಿಸಿದರು.

ದೇಶದಲ್ಲಿರುವ ಪ್ರತಿಯೊಬ್ಬರು ಜಾಗೃತರಾಗಬೇಕಿದೆ. ಒಗ್ಗಟ್ಟಿನಿಂದ ಬದುಕಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರಾಂತ ಕೋಶಾಧ್ಯಕ್ಷ ಸಂಜೀವ ಬಡಸ್ಕರ್, ಜಿಲ್ಲಾ ಕಾರ್ಯದರ್ಶಿ ರಘು ಯಲ್ಲಕ್ಕಣ್ಣವರ, ಧಾರವಾಡ ವಿಭಾಗ ಕಾರ್ಯದರ್ಶಿ ರಮೇಶ ಕದಂ, ಮಹಾನಗರ ಮಾತೃಶಕ್ತಿ ಪ್ರಮುಖ ವೀಣಾ ತಿಳವಳ್ಳಿ, ಬಜರಂಗದಳದ ಧಾರವಾಡ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ, ಮಲ್ಲಿಕಾರ್ಜುನ, ದತ್ತಮೂರ್ತಿ ಕುಲಕರ್ಣಿ, ಅಶೋಕ ಅನ್ವೇಕರ, ಸುಭಾಸಿಂಗ್ ಜಮಾದಾರ, ಯಶೋಧಾ ತಾಂಬೆ ಇದ್ದರು.