ವಿಭೂತಿಹಳ್ಳಿಗೆ ನೀರಿಗೆ ಹಾಹಾಕಾರ-ಚುನಾವಣೆ ಬಹಿಷ್ಕಾರ

| Published : Mar 25 2024, 12:45 AM IST

ಸಾರಾಂಶ

ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಚರಂಡಿ ನೀರಿನಿಂದ ಬಾವಿ ನೀರು ಕಲುಷಿತಗೊಂಡಿರುವುದು. ತಳ್ಳು ಬಂಡಿಯಲ್ಲಿ ನೀರು ತರಲು ರಾಜ್ಯ ಹೆದ್ದಾರಿ ಮೇಲೆ ಹೊರಟಿರುವ ಮಕ್ಕಳು.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಬೇಸಿಗೆ ಆರಂಭದಲ್ಲಿಯೇ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಆರಂಭವಾಗಿದೆ. ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಿಡಿಒ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಗ್ರಾಮ ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿದ್ದು, ಸಚಿವರು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. ವಿಭೂತಿಹಳ್ಳಿ ತಾಲೂಕು ಕೇಂದ್ರದಿಂದ ಕೇವಲ ನಾಲ್ಕು ಕಿ.ಮೀ, ರಾಜ್ಯ ಹೆದ್ದಾರಿ ಮೇಲಿರುವ ಗ್ರಾಮ. ರಸ್ತಾಪುರ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತಿದೆ. ಇಲ್ಲಿ 500ಕ್ಕೂ ಹೆಚ್ಚು ಕುಟುಂಬಗಳಿಂದ 2000 ಜನರಿದ್ದಾರೆ. ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಜಿಪಂ ಸಿಇಒ, ತಾಪಂ ಇಒ ಹಾಗೂ ಪಿಡಿಒಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಪಂ ಸದಸ್ಯ ಭಾಗಪ್ಪಗೌಡ.

ಒಂದು ಕೊಡ ನೀರಿಗಾಗಿ ರಾತ್ರಿಯಿಡೀ ಪಾಳೆ:

ನೀರು ತರಲು ಊರಹೊರಗಿನ ವಗ್ಗರಾಯಣ್ಣ ದೇವಸ್ಥಾನದ ಬಳಿ ಇರುವ ಕೊಳವೆ ಬಾವಿಗೆ ರಾತ್ರಿ 2-3 ಗಂಟೆಯಿಂದ ಪಾಳಿ ಹಚ್ಚಬೇಕು. ಕಳೆದ ಒಂದು ತಿಂಗಳಿಂದ ದೊಡ್ಡವರು, ಮಹಿಳೆಯರು, ಮಕ್ಕಳಿಗೆ ನಿತ್ಯ ನೀರು ತರುವುದೇ ಕಾಯಕವಾಗಿದೆ. ನೀರು ತರುವಾಗ ರಸ್ತೆ ಅಪಘಾತವಾಗಿದ್ದೂ ಉಂಟು. ಗ್ರಾಮದಲ್ಲಿ ಎಂಟು ಕೈ ಪಂಪ್, ನಾಲ್ಕು ವಿದ್ಯುತ್ ಚಾಲಿತ ಕಿರು ನೀರು ಸರಬರಾಜು ಕೊಳವೆ ಬಾವಿಗಳಿವೆ. ಆರು ಕೈ ಪಂಪ್, ವಿದ್ಯುತ್ ಚಾಲಿತ 4 ಬೋರವೆಲ್‌ ಕೆಟ್ಟು ನಿಂತಿವೆ. ಈಗ ಊರಿಗೆ ಎರಡು ಕೈಪಂಪ್‌ಗಳೇ ಆಸರೆ. ಆರು ಕೈ ಪಂಪ್ ಸಣ್ಣಪುಟ್ಟ ರಿಪೇರಿ ಮಾಡಿದರೆ ಊರಿಗೆ ನೀರಿನ ಸಮಸ್ಯೆಯಾಗದು ಎನ್ನುತ್ತಾರೆ ಜನತೆ.

ಕುಡಿವ ನೀರಿನ ಸಮಸ್ಯೆ ಬಗೆಹರಿಸುವಂತೆ ಕೇಳಿದರೆ, ಪಿಡಿಒ ಉಡಾಫೆ ಉತ್ತರ ನೀಡುತ್ತಾರೆ. ಊರಿನ ಜನ ನಿಮಗೆ ಓಟು ಹಾಕಿ ಆರಿಸಿ ತಂದಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಬಾಯಿಗೆ ಬಂದಂತೆ ಹಿಂತಿರುಗಿ ಬೈಯುತ್ತಾರೆ ಎಂದು ಗೋಳು ತೋಡಿಕೊಳ್ಳುತ್ತಾರೆ ಗ್ರಾಪಂ ಸದಸ್ಯ ಸಾಯಬಣ್ಣ.

ಅರೆಬರೆ ಜೆಜೆಎಂ ಕಾಮಗಾರಿ:

ಜೆಜೆಎಂ ಕಾಮಗಾರಿಗೆ ರಸ್ತೆ ಅಗೆಯಲಾಗಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ರಿಪೇರಿ ಮಾಡದೇ, ಹಾಗೆ ಬಿಟ್ಟು ಹೋಗಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸುಮಾರು ವರ್ಷಗಳ ಹಿಂದೆ ಊರ ಜನರು ಬಾವಿ ನೀರನ್ನೆ ಕುಡಿಯಲು ಮತ್ತು ಬಳಕೆಗೆ ಉಪಯೋಗಿಸುತ್ತಿದ್ದರು. ಆದರೀಗ ಅಲ್ಲಲ್ಲಿ ಕೊಳವೆ ಬಾವಿ ನರು ಬಳಸುತ್ತಿದ್ದಾರೆ. ಆದರೆ ಈಗ ಬಾವಿ ಸುತ್ತಲು ಚರಂಡಿ ನೀರು ಸಂಗ್ರಹವಾಗಿ ಬಾವಿ ನೀರು ಚರಂಡಿ ನೀರಿನಿಂದ ಕಲುಷಿತವಾಗಿದೆ. ಬಾವಿ ಸುತ್ತಲು ಚರಂಡಿ ಸ್ವಚ್ಛತೆ ಮಾಡಿದರೆ, ಈ ನೀರು ಜಾನುವಾರುಗಳಿಗೆ ಮತ್ತು ದಿನ ಬಳಕೆಗೆ ಬಳಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮದ ಮಹಿಳೆ ಮಲ್ಲಮ್ಮ.

ವಿಭೂತಿಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ.

ಉಮಕಾಂತ ಹಳ್ಳೆ, ತಹಸೀಲ್ದಾರ್ ಶಹಾಪುರ.

ಊರಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಹೀಗಾಗಿ ದನಗಳನ್ನು ಮಾರುವಂತಹ ಪರಿಸ್ಥಿತಿ ಬಂದಿದೆ. ಕೂಡಲೇ ನೀರಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ.

ಸಕ್ರೆಮ್ಮ, ವಿಭೂತಿಹಳ್ಳಿ ಗ್ರಾಪಂ ಸದಸ್ಯೆ.