ಸಾರಾಂಶ
ಧಾರವಾಡದ ಪ್ರತಿಷ್ಠಿತ ಐಐಟಿಯ ನೂತನ ಸೌಲಭ್ಯಗಳ ಉದ್ಘಾಟನೆಯನ್ನು ಉಪರಾಷ್ಟ್ರಪತಿ ಜಗದೀಪ ಧನಕರ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಾದ ಮಾಡಲು ಧಾರವಾಡಕ್ಕೆ ಬಂದಿದ್ದು, ತಮಗೂ ಧಾರವಾಡಕ್ಕೂ ಮೊದಲಿನಿಂದಲೂ ಸಂಬಂಧವಿದೆ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ ಸ್ಮರಿಸಿಕೊಂಡರು.ಧಾರವಾಡದ ಪ್ರತಿಷ್ಠಿತ ಐಐಟಿಯ ನೂತನ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿದ ಅವರು, ಇಲ್ಲಿಯ ಹೈಕೋರ್ಟ್ ಪೀಠದಲ್ಲಿ ಪ್ರಕರಣದ ವಾದ ಮಾಡಲು ಬಂದಿದ್ದೆ. ಜೊತೆಗೆ ಧಾರವಾಡ ಪೇಢೆ ಎಂದರೆ ಪ್ರೀತಿ. ಹಲವು ಬಾರಿ ತಿಂದಿದ್ದೇನೆ. ಧಾರವಾಡದ ರೀತಿ ಕರ್ನಾಟಕಕ್ಕೂ ನನಗೂ ಹಳೆಯ ಸಂಬಂಧವಿದೆ. ನಾನು ರಾಜ್ಯಸಭೆಯ ಸಭಾಪತಿ ಇದ್ದಾಗ, ಬಲಗಡೆ ನೋಡಿದರೆ ಪ್ರಲ್ಹಾದ ಜೋಶಿ ಕಾಣುತ್ತಿದ್ದರು. ಎಡಗಡೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಕಾಣುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ಬಹಳ ಅನುಭವಿ ರಾಜಕಾರಣಿ ಎಂದರು.
ಜೋಶಿ ಅವರು ಬಹಳ ಅಚ್ಚುಕಟ್ಟಿನ ಕೆಲಸ ಮಾಡುತ್ತಾರೆ. ಧಾರವಾಡ ಅಭಿವೃದ್ಧಿಗಾಗಿ ಅಷ್ಟೇ ಅಲ್ಲ. ಅವರಿಗೆ ಈ ಭಾಗದ ಕಾಳಜಿ ಸಾಕಷ್ಟಿದೆ ಎಂದ ಅವರು, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯನ್ನು ಹೊಗಳಿದರು.ಇದೀಗ ಎಲ್ಲೆಡೆ ಮಹಿಳಾ ಶಕ್ತಿ ಹೆಚ್ಚಾಗಿದೆ. ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. 2029ಕ್ಕೆ ಶೇ.33 ರಷ್ಟು ಸಂಸದರು ಮಹಿಳೆಯರೇ ಆಗಿರುತ್ತಾರೆ. ಹಾಗೆಯೇ, ಯುವಕರು ಸೋಲೇ ಗೆಲುವಿನ ಸೋಪಾನ ಎನ್ನುವುದನ್ನು ಮರೆಯಬಾರದು ಎಂದರು.
ಚಂದ್ರಯಾನ 2ರಲ್ಲಿ ಕೊನೆ ಹಂತದಲ್ಲಿ ಸೋತೆವು. ಚಂದ್ರಯಾನ 3 ಯಶಸ್ವಿಯಾಯಿತು. ಇದು ಕೇವಲ ನಮ್ಮ ದೇಶದಿಂದ ಸಾಧ್ಯವಾಯಿತು. ವಿಕ್ರಾಂತ ತಯಾರಿಸಿದ್ದು ನಮ್ಮ ದೇಶ. ಹೆಲಿಕಾಪ್ಟರ್‌ಗಳನ್ನು ಕೂಡಾ ಭಾರತ ತಯಾರಿಸುತ್ತಿದೆ. ಇಸ್ರೋ ಬೇರೆ ದೇಶಗಳ ಉಪಗ್ರಹ ಉಡಾಯಿಸುತ್ತಿದೆ ಎಂದರು.