ಪ್ರವಾಹ ಪರಿಹಾರಕ್ಕಾಗಿ ಬೀದಿಗಿಳಿದ ಸಂತ್ರಸ್ತರು

| Published : Aug 13 2024, 12:56 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ಕಳೆದ 2019ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಮುಧೋಳ ತಾಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ನದಿ ಪಾತ್ರದ ಜಮೀನು ಜಲಾವೃತಗೊಂಡು ರೈತರು ಬೆಳೆಗಳನ್ನು ಕಳೇದುಕೊಂಡಿದ್ದಾರೆ. ಅಲ್ಲದೇ, ದಂಡೆಯಲ್ಲಿನ ವಿವಿಧ ಗ್ರಾಮಗಳು ಮುಳುಗಡೆಯಾಗಿ ಜನರು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮುಧೋಳ

ಕಳೆದ 2019ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಮುಧೋಳ ತಾಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ನದಿ ಪಾತ್ರದ ಜಮೀನು ಜಲಾವೃತಗೊಂಡು ರೈತರು ಬೆಳೆಗಳನ್ನು ಕಳೇದುಕೊಂಡಿದ್ದಾರೆ. ಅಲ್ಲದೇ, ದಂಡೆಯಲ್ಲಿನ ವಿವಿಧ ಗ್ರಾಮಗಳು ಮುಳುಗಡೆಯಾಗಿ ಜನರು ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆಯನ್ನು ನಡೆಸಲಾಯಿತು.ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಮುಧೋಳದ ಉತ್ತರ ಕರ್ನಾಟಕ ಮುಳಗಡೆ ನೆರೆ ಸಂತ್ರಸ್ತರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಬೃಹತ್‌ ಪ್ರತಿಭಟನೆ ನಡೆಸಿ ನಡೆಸಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಬೇಕೆಂದು ಆಗ್ರಹಿಸಿದರು.

ರೈತರ ಹೋರಾಟಕ್ಕೆ ವಕೀಲರ ಸಂಘ, ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ರೈತರು ಸೇರಿ ಸಾರ್ವಜನಿಕರು ಪಾಲ್ಗೊಂಡಿದ್ದರು.ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಒಂದೆರೆಡು ದಿನಗಳಲ್ಲಿ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ರೈತ ಮುಖಂಡರ ಜೊತೆ ಚರ್ಚೆ ನಡೆಸುತ್ತಾರೆ. ತಮ್ಮ ಬೇಕು ಬೇಡಿಕೆಗಳ ಕುರಿತು ಚರ್ಚಿಸಿ ತಮ್ಮೆಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ, ಪ್ರತಿಭಟನಾಕಾರರು ತಾತ್ಕಾಲಿಕವಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ನಗರದ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿತ್ತು, ಎಂದಿನಂತೆ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.

---------------------------------

ಕೋಟ್‌

ಪ್ರತಿವರ್ಷ ಘಟಪ್ರಭಾ ನದಿಗೆ ಪ್ರವಾಹ ಬಂದು ರೈತರು ಬೆಳೆದ ಬೆಳೆಗಳು ಕೊಳೆತು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗೆ ಪ್ರತಿ ಎಕರೆಗೆ ₹1ಲಕ್ಷ ಹಾಗೂ ಸಾಮಾನ್ಯ ಬೆಳೆಗೆ ₹ 50 ಸಾವಿರ ಪರಿಹಾರವನ್ನು ತಕ್ಷಣವೇ ನೀಡಬೇಕು.ಬಸವಂತಪ್ಪ ಕಾಂಬಳೆ, ರೈತ ಮುಖಂಡ------------------------------

ಕೋಟ್‌

ಇನ್ನು ಒಂದೆರೆಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ರೈತ ಮುಖಂಡರ ಜೊತೆ ಚರ್ಚೆ ನಡೆಸುತ್ತಾರೆ. ತಮ್ಮ ಬೇಕು ಬೇಡಿಕೆಗಳ ಕುರಿತು ನಿಮ್ಮೊಂದಿಗೆ ಚರ್ಚಿಸಿ ತಮ್ಮೆಲ್ಲರಿಗೂ ನ್ಯಾಯ ಒದಗಿಸಲಾಗುವುದು.ಜಾನಕಿ.ಕೆ.ಎಂ, ಜಿಲ್ಲಾಧಿಕಾರಿ

-----