ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಬಿಟಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಬಾಗಲಕೋಟೆಯಲ್ಲಿ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಸಮಿತಿ ಮುಖಂಡರು, ಯುನಿಟ್ -2ರಲ್ಲಿನ ಸಂತ್ರಸ್ತರಿಗೆ ಆರ್ಥಿಕವಾಗಿ ವ್ಯಾಪಾರ ವಹಿವಾಟು ಇಲ್ಲ. ಯಾವುದೇ ಮೂಲ ಸೌಲಭ್ಯಗಳಿಲ್ಲ. 521 ಮೀ ಹಾಗೂ 523 ಮೀ ಮತ್ತು 100 ಮೀವರೆಗಿನ ಸಂತ್ರಸ್ತರಿಗೆ ಮೂರನೇ ಕಂತಿನ ಪರಿಹಾರ ಧನ ಬಾಕಿ ಇದ್ದು, 106 ರಿಂದ 115 ಸೆಕ್ಟರ್ ನಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆಯಾಗಿವೆ. ಆದರೆ, ಯಾವುದೇ ಮೂಲ ಸೌಕರ್ಯ ಇನ್ನೂವರೆಗೂ ಇಲ್ಲ. ಸಂತ್ರಸ್ತರಿಗೆ ತೆರವುಗೊಳಿಸಲು ನೋಟಿಸ್ ಅಂಟಿಸಿದ್ದು, ಇದು ಸರಿಯಾದ ಕ್ರಮ ಅಲ್ಲ ಎಂದು ಬಿಟಿಡಿಎ ಮುಖ್ಯ ಎಂಜನಿಯರ್ ಡಿ.ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
521 ಮೀ.ರಿಂದ 523 ಮೀ ಹಾಗೂ 100 ಮೀ.ವರೆಗೆ ಮುಳುಗಡೆ ಹೊಂದಿದ ದೇವಸ್ಥಾನಗಳು, ಸಮುದಾಯಗಳು, ಸಂಘ ಸಂಸ್ಥೆಗಳಿಗೆ ನಿವೇಶನ ಹಂಚಿಕೆಯಾಗಿಲ್ಲ. ಅವುಗಳ ನಿವೇಶನವನ್ನು ಆಯಾ ವಾರ್ಡನ ಸಂತ್ರಸ್ತರು ಬರುವ ಸೆಕ್ಟರ್‌ದಲ್ಲಿ ಧಾರ್ಮಿಕ ನಿವೇಶನ ಕಾಯ್ದಿರಿಸಿದ್ದು, ಅವುಗಳನ್ನೇ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.521 ಮೀ. ಮತ್ತು 523 ಮೀ ಹಾಗೂ 100 ಮೀ ಹಿನ್ನೀರಿನ ಕಟ್ಟಡಗಳು ನಡುಗಡ್ಡೆ ಹಾಗೂ ಮುಳುಗಡೆಯಾಗಲಾರದ ಕಟ್ಟಡಗಳಿಗೆ ಹೊಂದಿಕೊಂಡಿದ್ದು, ನಡುಗಡ್ಡೆ ಹಾಗೂ ನಗರವನ್ನು ಸಂಪೂರ್ಣ ಸ್ಥಳಾಂತರಗೊಳಿಸಬೇಕು. ನಡುಗಡ್ಡೆ ಪ್ರದೇಶಕ್ಕೆ ಈಗಾಗಲೇ 11(1), 1052 ಮನೆಗಳಿಗೆ ನೋಟಿಫಿಕೇಶನ್ ಮಾಡಿದ್ದು ಮುಂದಿನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ, ಕಾರ್ಯಾಧ್ಯಕ್ಷ ಸದಾನಂದ ನಾರಾ, ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಸುರೇಶ ಮಜ್ಜಗಿ, ಗುಂಡೂರಾವ ಶಿಂಧೆ, ನಗರಸಭೆ ಸದಸ್ಯರಾದ ಶ್ರೀನಾಥ ಸಜ್ಜನ, ರಮೇಶ ಕೋಟಿ, ಶಶಿಕಲಾ ಮಜ್ಜಗಿ, ಭೀಮಸಿ ಮೊರೆ ಸೇರಿದಂತೆ ಸಂತ್ರಸ್ತರು ಪಾಲ್ಗೊಂಡಿದ್ದರು.ತೆರವುಗೊಳಿಸಲು ನಾವು ನೋಟಿಸ್ ಆದೇಶವನ್ನು ಕೊಟ್ಟಿಲ್ಲ. ಪ್ರಕಟಣೆ ಮಾತ್ರ ನೀಡಿದ್ದೇವೆ. ಮಳೆಗಾಲ ಹಿನ್ನೆಲೆಯಲ್ಲಿ ಸಂತ್ರಸ್ತರು ಅಪಾಯದಲ್ಲಿ ಜೀವನ ಸಾಗಿಸಬಾರದು. ನವನಗರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ.
-ಡಿ.ಬಸವರಾಜ ಮುಖ್ಯ ಎಂಜಿನಿಯರ್ ಬಿಟಿಡಿಎ