ಕನ್ನಡಪ್ರಭ ವಾರ್ತೆ ಬಾಗಲಕೋಟೆ ಹಿರಿಯ ನಾಯಕರ ಕೆಲಸ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿ ಹೆಚ್ಚಿನ ಅಂತರದ ಗೆಲುವು ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿರಿಯ ನಾಯಕರ ಕೆಲಸ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿ ಹೆಚ್ಚಿನ ಅಂತರದ ಗೆಲುವು ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವೈ.ಮೇಟಿ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಈ ಭಾಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಭರವಸೆ ನೀಡದಿದ್ದರೂ ನಮ್ಮ ಸರ್ಕಾರ ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಭೂ ಸಂತ್ರಸ್ತರಾಗಿರುವ ಗ್ರಾಮೀಣ ಭಾಗದ ರೈತರಿಗೆ ಪರಿಹಾರ ವಿತರಣೆ ಮಾಡಿದೆ. ಬೊಮ್ಮಾಯಿ ಅವರ ಸರ್ಕಾರ ಇದನ್ನು ನೀಡಲು ವಿಫಲವಾಗಿದ್ದರೂ ನಾವು ನೀಡಿದ್ದೇವೆ. ಆಲಮಟ್ಟಿ ಅಣೆಕಟ್ಟು ಎತ್ತರ ವಿಚಾರವಾಗಿ ಸದನದಲ್ಲಿ ನಿರ್ಣಯ ಮಂಡಿಸಿದ್ದು, ಈ ಯೋಜನೆ ಜಾರಿಗೆ ನಮ್ಮ ಬದ್ಧತೆ ತೋರಿದ್ದೇವೆ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆಯೇ ಇಲ್ಲವೋ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ವಿಪಕ್ಷದವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಫಲಾನುಭವಿಗಳು ನಾವು ಈ ಹಿಂದೆ ಬಿಜೆಪಿಗೆ ಮತ ಹಾಕಿದ್ದಾಗ ನಮಗೆ ಯಾವುದೇ ನೆರವಾಗಿರಲಿಲ್ಲ. ಆದರೆ ಮುಂದೆ ನಿಮ್ಮ ಋಣ ತೀರಿಸುತ್ತೇವೆ ಎಂದು ಉಪಕಾರ ಸ್ಮರಣೆ ಮಾಡುತ್ತಿದ್ದಾರೆ. ಇದು ನಮಗೆ ಸಂತೋಷದ ವಿಚಾರ. ದಾವಣಗೆರೆಯಾಗಲಿ, ಬಾಗಲಕೋಟೆಯಾಗಲಿ ನಗರ ಪ್ರದೇಶಗಳಲ್ಲಿ ಜನ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಬಿಜೆಪಿಗೆ ಜನರಿಂದ ತಕ್ಕ ಪಾಠ:
ಕೇಂದ್ರ ಸರ್ಕಾರ ಕಷ್ಟ ಕಾಲದಲ್ಲಿ ಜನರ ನೆರವಿಗೆ ನಿಲ್ಲಬೇಕಿತ್ತು. ನಮ್ಮ ಸರ್ಕಾರ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ಇಳಿಸಲು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದ ಪ್ರತಿ ತಿಂಗಳು ಬಡ ಹಾಗೂ ಮಧ್ಯಮವರ್ಗದ ಕುಟುಂಬದವರಿಗೆ ₹4-5 ಸಾವಿರ ಹಣ ಉಳಿತಾಯವಾಗುವಂತೆ ಮಾಡಿದೆವು. ಇಂದಿನಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೇವಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಮಾತ್ರವಲ್ಲ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದ್ದು ಮನೆ ಕಟ್ಟುವುದು ಕಷ್ಟವಾಗಿದೆ. ಗ್ಯಾಸ್ ಬದಲಾಗಿ ಸೀಮೆಎಣ್ಣೆ ಬಳಸುವ ಪರಿಸ್ಥಿತಿ ಬಂದಿದೆ. ಕೇಂದ್ರದ ಭರವಸೆ ನೀಡಿದ್ದ ಅಚ್ಛೇದಿನ ಹೋಗಿ, ಸೌದೆ ಭಾಗ್ಯ ಬಂದಿದೆ. ಕೇಂದ್ರ ಹೇಳಿದ್ದ ₹15 ಲಕ್ಷ ಕೂಡ ಬ್ಯಾಂಕ್ ಖಾತೆಗಳಿಗೆ ಬರಲಿಲ್ಲ. ಇದೆಲ್ಲದರ ಬಗ್ಗೆ ನಾವು ಬಿಜೆಪಿಯನ್ನು ಪ್ರಶ್ನಿಸಬೇಕು. ಈ ಚುನಾವಣೆಯಲ್ಲಿ ಜನರು ಅತಿ ಹೆಚ್ಚು ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.ಬೆಲೆ ಏರಿಕೆ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿರುವ ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸಬೇಕು. ಹಿರಿಯ ನಾಯಕನ ಬೇಡಿಕೆಗಳನ್ನು ನಾವು ಈಡೇರಿಸಿ, ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇವೆ. ಎರಡೂ ಕ್ಷೇತ್ರಗಳ ಜನ ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ರವಾನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ ಹಾಕುವಂತೆ ಬಿಜೆಪಿ ಬೆದರಿಕೆ:ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ತಮ್ಮ ಬದುಕಿಗಾಗಿ ವಲಸೆ ಹೋಗಿದ್ದಾರೆ. ಅವರನ್ನು ನಾವು ವಾಪಸ್ ಕರೆತರುವ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಬಾಗಲಕೋಟೆ ಕೆಲವು ವಾರ್ಡ್‌ಗಳಲ್ಲಿ ಹೊರಗಡೆಯಿಂದ ಬಂದಿರುವ ವಿದ್ಯಾರ್ಥಿಗಳಿದ್ದು, ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರ ಊರಿನಲ್ಲೂ ಮತ ಇದೆ, ಇಲ್ಲೂ ಮತ ಇದೆ. ನಮ್ಮ ಅಭ್ಯರ್ಥಿ ಇಂತಹವರ ಮತದಾರರ ಗುರುತಿನ ಚೀಟಿ ಕಸಿದಿಟ್ಟುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮತಹಾಕಬೇಕು. ಇಲ್ಲದಿದ್ದರೆ ಫೇಲ್ ಮಾಡುತ್ತೇವೆ. ತೊಂದರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದ್ದೇನೆ. ಎರಡು ಮತಗಳಿರುವವರನ್ನು ಪತ್ತೆ ಹಚ್ಚಲು ಒಂದು ತಂಡವನ್ನೇ ಮೀಸಲಿಟ್ಟಿದ್ದೇವೆ. ಇಂತಹವರನ್ನು ಬಂಧಿಸಲು ಅಕಾಶವಿದೆಯೇ ಎಂದು ಪರಿಶೀಲಿಸುತ್ತಿದ್ದು, ಆದಷ್ಟು ಬೇಗ ಇವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪಕ್ಷ ತೀರ್ಮಾನ ಒಪ್ಪುತ್ತೇವೆ:ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಅದರಲ್ಲಿ ತಪ್ಪೇನಿದೆ. ಪಕ್ಷದ ತೀರ್ಮಾನವನ್ನು ನಾವಿಬ್ಬರೂ ಒಪ್ಪುವುದಾಗಿ ಹೇಳಿದ್ದೇವೆ. ಪಕ್ಷ ಹೇಳಿದ್ದನ್ನು ಅವರು ಒಪ್ಪುತ್ತಾರೆ, ನಾನು ಒಪ್ಪಿಕೊಳ್ಳುವೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದರು.
ನಮ್ಮನ್ನು ತುಳಿಯುವುದಕ್ಕೆ ಬಂದರೆ ನಾವು ಯಾರನ್ನೂ ಬಿಡುವುದಿಲ್ಲ ಎಂಬ ಬಂಜಾರ ಸ್ವಾಮೀಜಿ ಹೇಳಿಕೆ ಬಗ್ಗೆ ಕೇಳಿದಾಗ, ಒಳ ಮೀಸಲಾತಿ ವಿಚಾರದಲ್ಲಿ ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಎಲ್ಲಾ ಸಮಾಜಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಈ ವಿಚಾರವಾಗಿ ಜನರಿಗೆ ಮಾತು ಕೊಟ್ಟಿರುವುದು ನಾವೇ ಹೊರತು ಬಿಜೆಪಿಯವರಲ್ಲ. ಈ ನೀತಿ ಸಂಹಿತೆ ಬರದೇ ಇದ್ದಿದ್ದರೆ ನಾವು ತೀರ್ಮಾನ ಮಾಡುತ್ತಿದ್ದೆವು. ನಾವು ಬಂಜಾರ ಸಮುದಾಯದಿಂದ ಹಿಡಿದು ಅಲೆಮಾರಿ ಸಮಾಜ ಸೇರಿ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ತಿಳಿಸಿದರು.ಕಾಂಗ್ರೆಸ್ ಕಾರ್ಯಕರ್ತರು ಮನೆಗಳಿಗೆ ತೆರಳಿ ಧಮಕಿ ಹಾಕುತ್ತಿದ್ದಾರೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಈ ಕೆಲಸವನ್ನು ಬಿಜೆಪಿಯವರು ಅಸ್ಸಾಂನಲ್ಲಿ ಈಗಾಗಲೇ ಮಾಡುತ್ತಿದ್ದಾರೆ. ಇಲ್ಲಿ ನಮ್ಮ ಮೇಲೆ ಈ ಆರೋಪ ಮಾಡುತ್ತಿದ್ದಾರೆ. ನಾವು ಎಲ್ಲರಿಗೂ ಈ ಯೋಜನೆ ತಲುಪಿಸುತ್ತಿದ್ದು, ಜನರು ಸಂತೋಷದಿಂದ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಹೊರಗಿನಿಂದ ಬಂದಿರುವ ವಿದ್ಯಾರ್ಥಿಗಳಿಗೆ ಧಮಕಿ ಹಾಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.