ಮೈತ್ರಿಯಿಂದ ಲೋಕಸಭೆ, ಪರಿಷತ್‌ ಚುನಾವಣೆಯಲ್ಲೂ ಗೆಲುವು: ಬಿ.ವೈ.ರಾಘವೇಂದ್ರ

| Published : May 17 2024, 01:33 AM IST / Updated: May 17 2024, 11:14 AM IST

ಮೈತ್ರಿಯಿಂದ ಲೋಕಸಭೆ, ಪರಿಷತ್‌ ಚುನಾವಣೆಯಲ್ಲೂ ಗೆಲುವು: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

  ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿರುವಂತೆ ದೇಶದಲ್ಲಿ 400 ಕ್ಷೇತ್ರಗಳಿಗೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಈಗ ನಡೆದಿರುವ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸುತ್ತದೆ ಎನ್ನುವುದರ ಬಗ್ಗೆ ಅಂಕಿ ಅಂಶ ಹೇಳುತ್ತಿವೆ.

 ಮೈಸೂರು :  ಮೈತ್ರಿ ಬಲದಿಂದಾಗಿ ಲೋಕಸಭೆ ಮತ್ತು ಪರಿಷತ್‌ ಚುನಾವಣೆಯಲ್ಲಿಯೂ ಗೆಲ್ಲುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಗುರುವಾರ ಸುದ್ದಿಗಾರರೊಡನೆ ಮಾತನಾಡಿ, ಲೋಕಸಭೆಯ ಜತೆಗೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಈ ಬಾರಿಯ ಚುನಾವಣೆಗೆ ಮೈತ್ರಿಯ ಬಲವಿದೆ ಎಂದರು.

ರಘುಪತಿ ಭಟ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರ ಜತೆ ಪಕ್ಷದ ಮುಖಂಡರು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಮೂರು ದಿನ ಕಾಲಾವಕಾಶವಿದೆ. ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ತಿಳಿಸಿದರು.

ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿರುವಂತೆ ದೇಶದಲ್ಲಿ 400 ಕ್ಷೇತ್ರಗಳಿಗೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಈಗ ನಡೆದಿರುವ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸುತ್ತದೆ ಎನ್ನುವುದರ ಬಗ್ಗೆ ಅಂಕಿ ಅಂಶ ಹೇಳುತ್ತಿವೆ ಎಂದು ತಿಳಿಸಿದರು. 

ಪ್ರಜ್ವಲ್‌ ಪೆನ್‌ ಡ್ರೈವ್ ಪ್ರಕರಣದಿಂದ ವಿಧಾನ ಪರಿಷತ್‌ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಕರಣ ಸಂಬಂಧ ಜೆಡಿಎಸ್‌ ನಾಯಕರು ಉತ್ತರಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ಕೂಡ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಇದಕ್ಕೂ ಮೊದಲು ನಜರ್‌ ಬಾದ್‌ ನ ಕಲ್ಯಾಣಮಂಟಪದಲ್ಲಿ ನಡೆದ ನೈಋತ್ಯ ಶಿಕ್ಷಕರ ಕ್ಷೇತ್ರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಚನ್ನಬಸಪ್ಪ, ಅಭ್ಯರ್ಥಿ ಧನಂಜಯ ಸರ್ಜಿ ಇದ್ದರು.

ನನ್ನ ಗೆಲುವಿಗೆ ಅಡ್ಡಿ ಇಲ್ಲ

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ಚುನಾವಣಾ ಆಯೋಗಕ್ಕೆ ಕೆ.ಎಸ್. ಈಶ್ವರಪ್ಪ ದೂರು ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣಾ ಫಲಿತಾಂಶ ಹೊರ ಬಂದ ಮೇಲೆ ಮಾತನಾಡುವೆ. ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ ಗೆಲುವಿಗೆ ಯಾವ ಅಡ್ಡಿಯೂ ಇಲ್ಲ.

ಬಿ.ವೈ.ರಾಘವೇಂದ್ರ, ಸಂಸದಡಾ.ಧನಂಜಯ ಸರ್ಜಿ ನಾಮಪತ್ರ ಸಲ್ಲಿಕೆ

ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಎಚ್‌ಡಿಕೆ, ಅಶೋಕ್‌, ರಾಘವೇಂದ್ರ ಸಾಥ್‌

ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಿ.ವೈ.ರಾಘವೇಂದ್ರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಜರಿದ್ದರು. ಇದಕ್ಕೂ ಮುನ್ನ ತಾಯಿ ರೇಣುಕಮ್ಮ , ಪತ್ನಿ ನಮಿತಾ ಸರ್ಜಿ ಅವರೊಂದಿಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡ, ಬಿಜೆಪಿ ಹಿರಿಯ ಮುಖಂಡರಾದ ಎನ್.ಜೆ.ರಾಜಶೇಖರ್ ಸೇರಿ ಕುಟುಂಬದ ಸದಸ್ಯರು, ಬಂಧುಗಳು, ಹಿತೈಷಿಗಳು ಭಾಗಿಯಾಗಿದ್ದರು, ಅಲ್ಲದೇ ‌ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ (ಚನ್ನಗಿರಿ, ನ್ಯಾಮತಿ, ಹೊನ್ನಾಳಿ) ಜಿಲ್ಲೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.