ರಾಮನಗರ: ಭೂ ಸ್ವಾಧೀನ ವಿರುದ್ಧ ಮಾತ್ರವಲ್ಲ ಯಾವುದೇ ಹೋರಾಟಗಳನ್ನು ಮಹಾತ್ಮಗಾಂಧೀಜಿರವರು ತೋರಿಸಿಕೊಟ್ಟ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆಸಿದಾಗ ಮಾತ್ರ ಜಯ ಸಿಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದರು.
ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂಸಾ ಮಾರ್ಗದಲ್ಲಿ ನಡೆಸಿದ ಹೋರಾಟಗಳಿಗೆ ಗೆಲುವು ಸಿಕ್ಕ ಉದಾಹರಣೆಗಳಿಲ್ಲ. ಆದ್ದರಿಂದ ರೈತರು ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿಯೇ ಹೋರಾಟ ಮುನ್ನಡೆಸಬೇಕು.ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಿಂದಿನ ಸಾಮಾಜಿಕ ಹೋರಾಟಗಾರರೆಲ್ಲರೂ ನಮಗೆ ಪ್ರೇರಣೆಯಾಗಿದ್ದಾರೆ. ಪ್ರಸ್ತುತ ದೇವನಹಳ್ಳಿ, ಚನ್ನರಾಯಪಟ್ಟಣ, ಬಿಡದಿ ಮುಂತಾದ ಕಡೆಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರುದ್ಧದ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿದೆ. ರೈತರ ಕೃಷಿಭೂಮಿಯನ್ನು ಉಳಿಸಿಕೊಳ್ಳಲು ಎಲ್ಲರೂ ಪಣತೊಟ್ಟು ನಿಲ್ಲಬೇಕಿದೆ ಎಂದ ಅವರು ಸರ್ಕಾರಿ ಭೂಮಿ ಕಬಳಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಡೆಸಿ ಯಶಸ್ವಿಯಾದ ತಮ್ಮ ಹೋರಾಟಗಳ ಬಗ್ಗೆ ಮೆಲುಕು ಹಾಕಿದರು. ಇದೀಗ ಪಶ್ಚಿಮಘಟ್ಟ ಉಳಿಸಿ ಎಂಬ ಹೋರಾಟವನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.
ದೆಹಲಿಯ ಯುವಕರ ಹೋರಾಟ ದೇಶದ ಗಮನ ಸೆಳೆದಿದ್ದು ಆ ಮಾರ್ಗದಲ್ಲಿ ಯುವಕರು ಸಾಗಬೇಕಿದೆ. ನಿಮ್ಮ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ವರದಿಯ ನಿರೀಕ್ಷೆಯಲ್ಲಿದ್ದೇವೆ. ನಂತರ ಕಾನೂನು ಹೋರಾಟಕ್ಕೆ ತಾವು ಸಾಥ್ ನೀಡುವುದಾಗಿ ಹೀರೆಮಠ್ ಭರವಸೆ ನೀಡಿದರು.ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಸರ್ಕಾರಿ ಗೋಮಾಳ ಮತ್ತು ದಲಿತರ ಜಮೀನುಗಳನ್ನು ಕಬಳಿಕೆ ಮಾಡಿದ್ದಾರೆ. ಇಲ್ಲಿನ ಕೇತಗಾನಹಳ್ಳಿಯಲ್ಲಿಯೇ ಅವರ ಕುಟುಂಬದವರು ಜಮೀನು ಕಬಳಿಕೆ ಮಾಡಿರುವುದರ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತಿದ್ದೇನೆ. ನನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದರೂ ನಾನು ಮಾತ್ರ ಅಹಿಂಸಾ ಮಾರ್ಗದಲ್ಲಿ ಹೋರಾಟ ಮುಂದುವರೆಸಿದ್ದೇನೆ ಎಂದು ತಿಳಿಸಿದರು.
ಟೌನ್ ಶಿಪ್ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ರಾಜಕೀಯ ಪಕ್ಷಗಳ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಹೋರಾಟಕ್ಕೆ ಅನೇಕ ಭಾಗಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಣ್ಣ ಮಟ್ಟದ ಹೋರಾಟ ಮುಂದೊಂದು ದಿನ ದೊಡ್ಡಮಟ್ಟದಲ್ಲಿ ತಿರುವು ಪಡೆದುಕೊಳ್ಳುತ್ತದೆ ಎಂದು ಹಿರೇಮಠ್ ಹೇಳಿದರು.
ಕಾರ್ಮಿಕ ಸಂಘಟನೆಯ ಮುಖಂಡ ಕೆ.ವಿ.ಭಟ್ ಮಾತನಾಡಿ, ಕೆಐಎಡಿಬಿ ವತಿಯಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿದೆ. ಅಲ್ಲಿ ಖಾಲಿಯಿರುವ ಭೂಮಿಯಲ್ಲಿ ಸರ್ಕಾರದವರು ಟೌನ್ ಶಿಪ್ ನಿರ್ಮಾಣ ಮಾಡಲಿ. ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಹೋರಾಟ ಸಮಿತಿಯ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಶೀನಪ್ಪರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಅಶ್ವಥ್, ಭಾಗ್ಯ ನಾಗರಾಜು, ಉಮಾ, ಜಯಮ್ಮ ಮತ್ತಿತರರು ಭಾಗವಹಿಸಿದ್ದರು.ಕೋಟ್..............
ರೈತ ಕುಟುಂಬಗಳು ಭೂ ತಾಯಿ ಮತ್ತು ಪ್ರಕೃತಿಯೊಂದಿಗೆ ಹೊಂದಿರುವ ಭಾವನೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ತಲೆದೂರಿದೆ. ಜನಸಾಮಾನ್ಯರು ಬೆಲೆ ಏರಿಕೆ ಹಾಗೂ ನಾನಾ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯದ ಸರ್ಕಾರ ರೈತರ ಕೃಷಿಭೂಮಿಯನ್ನು ಕಬಳಿಸಿ ಎಐ ಸಿಟಿ ಮಾಡಲು ಹೊರಟಿರುವುದು ಖಂಡನಿಯ.-ಎಚ್.ಪಿ.ಶಿವಪ್ರಕಾಶ್, ರೈತ ಮುಖಂಡರು, ಎಐಕೆಕೆಎಂಎಸ್
ಕೋಟ್...............ಟೌನ್ ಶಿಪ್ ಭಾದಿತ ಪ್ರದೇಶದ ರೈತರ ಅಭಿಪ್ರಾಯ ಸಂಗ್ರಹಣೆಗೆ ಎರಡು ತಿಂಗಳಲ್ಲಿ ಪ್ರತ್ಯೇಕ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದರಂತೆ ಶೀಘ್ರ ಸಮಿತಿ ರಚನೆಗೆ ಮುಂದಾಗಬೇಕು. ರೈತರ ಬದುಕಿನ ಜತೆಗೆ ಚಲ್ಲಾಟವಾಡುವುದನ್ನು ಬಿಟ್ಟು ಬೀದಿಗೆ ಬೀಳುವ ಸಾವಿರಾರು ರೈತಕುಂಟುಂಬಗಳ ಬಗ್ಗೆ ಸರ್ಕಾರ ಕಾಳಜಿವಹಿಸಬೇಕು.
-ಟಿ.ಯಶವಂತ್ , ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತಸಂಘ1ಕೆಆರ್ ಎಂಎನ್ 3.ಜೆಪಿಜಿ
ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿದರು.