ಒಗ್ಗಟ್ಟಿನ ಪ್ರಯತ್ನದಿಂದ ಗೆಲುವು: ರಾಜಶೇಖರ ಹಿಟ್ನಾಳ

| Published : Jun 05 2024, 12:30 AM IST

ಸಾರಾಂಶ

ಕೊನೆಗೂ ಗೆದ್ದಿರುವುದು ಖುಷಿ ತಂದಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊನೆಗೂ ಗೆದ್ದಿರುವುದು ಖುಷಿ ತಂದಿದೆ. ಕಳೆದ ಬಾರಿ ನಾನು ಮತ್ತು ಅದರ ಹಿಂದಿನ ಬಾರಿ ನನ್ನ ತಂದೆ ಸೋತಿದ್ದೆವು. ಈಗ ಅದೆಲ್ಲವನ್ನು ಮೀರಿ ಮತದಾರರು ನಮ್ಮ ಕೈ ಹಿಡಿದಿದ್ದರಿಂದ ಗೆಲುವು ದೊರೆತಿದ್ದು, ಒಗ್ಗಟ್ಟಿನ ಪ್ರಯತ್ನದ ಫಲ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾರೊಬ್ಬರ ಗೆಲುವು ಅಲ್ಲ, ಇದು ಪಕ್ಷದ ಗೆಲುವು, ಪಕ್ಷದ ನಾಯಕರ ಗೆಲುವು ಆಗಿದೆ ಎಂದರು.

ನನ್ನ ಮೇಲೆ ವಿಶ್ವಾಸವಿಟ್ಟು, ಪಕ್ಷದ ಟಿಕೆಟ್ ನೀಡಿದ್ದ ಪಕ್ಷದ ವರಿಷ್ಠರಿಗೆ ನಾನು ಋಣಿಯಾಗಿದ್ದೇನೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಗೆಲುವು ಸಾಧಿಸಿದ್ದು ಖುಷಿಯಾಗಿದೆ. ನನ್ನ ಗೆಲುವಿಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಹಗಲಿರಳು ಶ್ರಮಿಸಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಪ್ರಯತ್ನಿಸಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಎಲ್ಲರೂ ಗೆಲುವಿಗಾಗಿ ಶ್ರಮಿಸಿದ್ದಾರೆ ಎಂದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಮತ್ತು ಮತದಾರರು ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

ಮತಾದರರ ತೀರ್ಪಿಗೆ ತಲೆಬಾಗುವೆ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ. ಮತದಾರರ ತೀರ್ಪಿಗೆ ತಲೆಬಾಗುವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಹೇಳಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಪ್ರಕಟಣೆ ನೀಡಿರುವ ಅವರು, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟಿಸುತ್ತೇನೆ.

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿಯ ಕೇಂದ್ರ, ರಾಜ್ಯ ನಾಯಕರಿಗೆ, ನನ್ನ ಪರ ಪ್ರಚಾರ ಮಾಡಿದ ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದಗಳು. ಮತದಾರರು ತೋರಿಸಿದ ಪ್ರೀತಿಗೆ ನಾನು ಚಿರ ಋಣಿಯಾಗಿದ್ದೇನೆ. ಕಾರ್ಯಕರ್ತರ ಜತೆ ನಿಂತು ಪಕ್ಷ ಸಂಘಟಿಸುತ್ತೇನೆ.

ಚುನಾವಣೆ ವೇಳೆ ಕುಷ್ಟಗಿ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಮಸ್ಕಿ, ಸಿಂಧನೂರು, ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಪ್ರಚಾರದ ವೇಳೆ ಮನೆಯ ಮಗನಂತೆ ಪ್ರೀತಿ ತೋರಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ. ಪರಾಜಿತಗೊಂಡರೂ, ಜನರ ಮಧ್ಯೆ ಇದ್ದು, ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಹೋರಾಡುವೆ ಎಂದಿದ್ದಾರೆ.