ಮೈಸೂರಿನಿಂದ ಫೆ.14ರಂದು ವಿಧಾನ ಸೌಧ ಚಲೋ ಪಾದಯಾತ್ರೆ: ಗಣೇಶಾರಾಧ್ಯ

| Published : Feb 13 2025, 12:46 AM IST

ಮೈಸೂರಿನಿಂದ ಫೆ.14ರಂದು ವಿಧಾನ ಸೌಧ ಚಲೋ ಪಾದಯಾತ್ರೆ: ಗಣೇಶಾರಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್ ಪಾದಯಾತ್ರೆಯು ಮೈಸೂರಿನ ಚಾಮುಂಡಿ ತಪ್ಪಲಿನಿಂದ ಪ್ರಾರಂಭಗೊಳ್ಳಲಿದೆ. ಆರಂಭಕ್ಕೂ ಮುನ್ನ ವೇದವಿದ್ವಾನ್, ಗ್ರಂಥ ಕತೃಗಳಾದ ವಿದ್ವಾನ್ ನಂಜುಂಡಾರಾಧ್ಯರು ಹಾಗೂ ಪಂಡಿತ್ ಕಾಶಿನಾಥ ಶಾಸ್ತ್ರಿಗಳ ಸ್ಮಾರಕಗಳಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಯ ಯಶಸ್ಸಿಗೆ ಸಂಕಲ್ಪಿಸಲಾಗುವುದು. 200ಕ್ಕೂ ಹೆಚ್ಚು ಅರ್ಚಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ವೀರಶೈವ ಲಿಂಗಾಯತ ಅರ್ಚಕ, ಪುರೋಹಿತ, ಆಗಮಿಕ ಹಾಗೂ ವೇದ ಆಗಮ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫೆ.14 ರ ವಿಧಾನ ಸೌಧ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತ ನಿಸ್ವಾರ್ಥ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಗಣೇಶಾರಾಧ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 8.15ಕ್ಕೆ ಮೈಸೂರಿನಿಂದ ವಿಧಾನಸೌಧ ಚಲೋ ಬೃಹತ್ ಪಾದಯಾತ್ರೆ ಹೊರಟು ಫೆ.17ರಂದು ಬೆಂಗಳೂರು ತಲುಪಲಿದೆ ಫೆ.18ರಂದು ಬೃಹತ್ ಸಮಾವೇಶ ನಡೆಸಿ ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬೃಹತ್ ಪಾದಯಾತ್ರೆಯು ಮೈಸೂರಿನ ಚಾಮುಂಡಿ ತಪ್ಪಲಿನಿಂದ ಪ್ರಾರಂಭಗೊಳ್ಳಲಿದೆ. ಆರಂಭಕ್ಕೂ ಮುನ್ನ ವೇದವಿದ್ವಾನ್, ಗ್ರಂಥ ಕತೃಗಳಾದ ವಿದ್ವಾನ್ ನಂಜುಂಡಾರಾಧ್ಯರು ಹಾಗೂ ಪಂಡಿತ್ ಕಾಶಿನಾಥ ಶಾಸ್ತ್ರಿಗಳ ಸ್ಮಾರಕಗಳಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಯ ಯಶಸ್ಸಿಗೆ ಸಂಕಲ್ಪಿಸಲಾಗುವುದು. 200ಕ್ಕೂ ಹೆಚ್ಚು ಅರ್ಚಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಆಗಮಿಕ ಪರಂಪರೆ ದೇವಾಲಯಗಳ, ಅರ್ಚಕ ಆಗಮಿಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ದಶಕಗಳ ಕಾಲದಿಂದಲೂ ನಿರ್ಲಕ್ಷಿಸಿದೆ ಎಂದು ದೂರಿದರು.

ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ 17,800 ಮುಜರಾಯಿ ದೇವಾಲಗಳು, 19 ವೇದಾಗಮ ಶಾಲೆಗಳು ಹಾಗೂ ಪೂಜಾ ಕೈಕಂರ್ಯಗಳನ್ನು ಕಡೆಗಣಿಸಿದೆ. ಸರ್ಕಾರ ವೇದಾಗಮ ಶಾಲೆಗಳಿಗೆ ಪಠ್ಯಕ್ರಮಗಳನ್ನು ಎಲ್ಲೂ ಕೊಟ್ಟಿಲ್ಲ. ದೇವಾಲಯಗಳ ಹಾಗೂ ವೇದಾಗಮ ಶಾಲೆಗಳ ಅಹವಾಲು ಸ್ವೀಕರಿಸಲು ವೀರಶೈವ ಆಗಮ ಪಂಡಿತರನ್ನು ನೇಮಕ ಮಾಡಿಲ್ಲ ಎಂದು ದೂರಿದರು.

ಸರ್ಕಾರ ಕೂಡಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವೀರಶೈವಾಗಮ ಹಿರಿಯ ಮತ್ತು ಕಿರಿಯ ಪಂಡಿತರ ಹುದ್ದೆ ಮಂಜೂರು ಮಾಡಿ, ಕಾಯಂಗೊಳಿಸಬೇಕು, ದೇವಾಲಯಗಳ ಕುಂದುಕೊರತೆ ಆಲಿಸಲು, ಜೀರ್ಣೋದ್ಧಾರ, ಕುಂಭಾಭಿಷೇಕ, ಉತ್ಸವಗಳಿಗೆ ಸಲಹೆ ಸೂಚನೆ ನೀಡಲು ವೀರಶೈವಾಗಮ ಪಂಡಿತರನ್ನೇ ನೇಮಕ ಮಾಡಬೇಕು. ಅರ್ಚಕರಿಗೆ ನೀಡುವ ಮಾಸಿಕ ತಸ್ತೀಕ್ ಮತ್ತು ವರ್ಷಾಸನ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಸವರಾಜ, ಗೌರವಾಧ್ಯಕ್ಷ ದಿನೇಶ, ನಿರ್ದೇಶಕ ವೀರೇಶ, ಕಾರ್ಯದರ್ಶಿ ಪ್ರಸಾದ್ ಇದ್ದರು.