ನೆಲಮಂಗಲ/ದಾಬಸ್‍ಪೇಟೆ: ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಬದುಕಿಗೆ ಆಸರೆಯಾಗುವ ಬದಲು ಬಂಡವಾಳಶಾಹಿಗಳ ಪರ ನಿಂತಿದ್ದಾರೆ
ನೆಲಮಂಗಲ/ದಾಬಸ್‍ಪೇಟೆ: ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಬದುಕಿಗೆ ಆಸರೆಯಾಗುವ ಬದಲು ಬಂಡವಾಳಶಾಹಿಗಳ ಪರ ನಿಂತಿದ್ದಾರೆ. ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದರೂ ಸರ್ಕಾರ ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನೆಲಮಂಗಲ ಪಟ್ಟಣದ ತಾಲೂಕು ಕಚೇರಿ ಸಮೀಪ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಬದುಕಿಗೆ ಆಸರೆಯಾಗದೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಸಿಗುತ್ತಿಲ್ಲ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುವಂತಾಗಿದೆ ಎಂದು ಆರೋಪಿಸಿದರು.ಕೇವಲ 36 ಸ್ಥಾನಗಳನ್ನು ಹೊಂದಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡಿ ತೋರಿಸಿದ್ದಾರೆ. ಆದರೆ ಇಂದು 136 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ರೈತರ ಸಾಲಮನ್ನಾ ಮಾಡಲು ಏಕೆ ಮುಂದಾಗುತ್ತಿಲ್ಲ?” ಎಂದು ಪ್ರಶ್ನಿಸಿದ್ದಲ್ಲದೆ ಭಾಗ್ಯಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ₹5,000 ಕೋಟಿ ಹಣದ ಲೆಕ್ಕವನ್ನು ಸರ್ಕಾರ ನೀಡಬೇಕು. ಫಲಾನುಭವಿಗಳಿಗೆ ಈ ಹಿಂದೆ ನೀಡಬೇಕಿದ್ದ ಎರಡು ತಿಂಗಳ ಹಣ ಏಕೆ ತಲುಪಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕರಿಗೆ ಸ್ಟ್ರೀಂಗ್ ಭೀತಿಯೇಕೆ?. : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೇಶದ ನೀರಾವರಿ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಇಂದಿನ ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಆಡಳಿತ ಪಕ್ಷದ ಶಾಸಕರಿಗೆ ಸ್ಟ್ರೀಂಗ್ ಕಾರ್ಯಾಚರಣೆಯ ಭೀತಿ ಎದುರಾಗಿದೆ, ಈ ಬಗ್ಗೆ ಶಾಸಕರು ಎಚ್ಚರಿಕೆಯಿಂದ ಇರಬೇಕೆಂದು ಮುಖ್ಯಮಂತ್ರಿಗಳೇ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ ಶಾಸಕರು ಯಾವ ರೀತಿಯ ಕೆಲಸಗಳಲ್ಲಿ ತೊಡಗಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸ್ಟಿಂಗ್ ಕಾರ್ಯಾಚರಣೆ ಮಾಡುವ ಅಭ್ಯಾಸ ಯಾರಿಗಿದೆ ಎಂಬುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ ಎಂದರು.ವೃಷಭಾವತಿ ನೀರು ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯ : ಬೆಂಗಳೂರು ನಗರದ ತ್ಯಾಜ್ಯ ನೀರನ್ನು ನೆಲಮಂಗಲಕ್ಕೆ ಹರಿಸುವ ಮೊದಲು ಸಮರ್ಪಕ ಶುದ್ಧೀಕರಣಕ್ಕೆ ಆದ್ಯತೆ ನೀಡಬೇಕು. ಮೂರನೇ ಹಂತದ ಶುದ್ಧೀಕರಣ ಮಾಡದೆ ನೀರನ್ನು ಹರಿಸಬಾರದು. ಜನರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ : ಜಮೀನಿನ ಪೋಡಿ ಕಾರ್ಯಗಳಿಗಾಗಿ ರೈತರು ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಂಟ್ ಜಮೀನುಗಳಲ್ಲಿಯೂ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದ ರಾಜ್ಯ ಸರ್ಕಾರ ಮತ್ತು ಕಂದಾಯ ಇಲಾಖೆ ಸೂಕ್ತ ಗಮನ ಹರಿಸಬೇಕು ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ರೈತರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.ರೈತರ ಸ್ವಾಭಿಮಾನದ ಹೋರಾಟಕ್ಕೆ ಸಿದ್ಧ: ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ. ಮಾತನಾಡಿ ಜೆಡಿಎಸ್ ರೈತರ ಕಷ್ಟಗಳಿಗೆ ಸ್ಪಂದಿಸುವ ಪಕ್ಷವಾಗಿದ್ದು, ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ರೈತಪರ ಕಾಳಜಿ ಮತ್ತು ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮಹತ್ವದ್ದಾಗಿವೆ. ರೈತರ ಸ್ವಾಭಿಮಾನ ಮತ್ತು ಬದುಕಿನ ರಕ್ಷಣೆಗಾಗಿ ಜೆಡಿಎಸ್ ಸದಾ ಸಿದ್ಧವಿದೆ. ರೈತರು ನಮ್ಮ ದೇಶದ ಬೆನ್ನೆಲುಬು. ಅವರ ಸಂಕಷ್ಟಗಳಿಗೆ ಪರಿಹಾರ ದೊರಕಿಸಲು ನಾವು ಹೋರಾಟ ನಡೆಸುತ್ತೇವೆ ಎಂದರು.
ಎತ್ತಿನಗಾಡಿಯಲ್ಲಿ ಮೆರವಣಿಗೆ : ನೆಲಮಂಗಲ ನಗರದ ಟಿ.ಬಿ. ಬಸ್ ನಿಲ್ದಾಣದಿಂದ ಆರಂಭವಾದ ಜಾಥಾ, ತಾಲ್ಲೂಕು ಕಚೇರಿ ಸಮೀಪದ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯವರೆಗೆ ಸಾಗಿತು. ನಿಖಿಲ್ ಕುಮಾರಸ್ವಾಮಿ ಅವರಿಗಾಗಿ ವಿಶೇಷವಾಗಿ ಅಲಂಕಾರಗೊಳಿಸಿದ್ದ ಎತ್ತಿನಗಾಡಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಈ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ ಮಂಜುನಾಥ್, ನೆಲಮಂಗಲ ತಾಲ್ಲೂಕು ಅಧ್ಯಕ್ಷರಾದ ತಿಮ್ಮರಾಯಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾದ ಹರೀಶ್ ಗೌಡ್ರು, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ರಾಜಣ್ಣ, ಸಂಪತ್ ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಂಗಸ್ವಾಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟೇಗೌಡ್ರು ನಾಗಭೂಷಣ್, ಯುವ ಘಟಕದ ಅಧ್ಯಕ್ಷ ಅಂಜನಮೂರ್ತಿ (ಪಾಪಣ್ಣಿ), ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವೇಣುಗೋಪಾಲ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಜೆಡಿಎಸ್ ಹೋಬಳಿ ಅಧ್ಯಕ್ಷರುಗಳಾದ ಮೋಹನ್ ಕುಮಾರ್, ವಿಷ್ಣು ರಮೇಶ್, ಮುಖಂಡರಾದ ಬೂದಿಹಾಳ್ ರಾಜು, ಸೋಲದೇವನಹಳ್ಳಿ ಗೋಪಾಲಯ್ಯ, ಜೆಡಿಎಸ್ ವಕ್ತಾರ ಕನಕರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಭುದೇವ್ ಕಂಬಾಳು, ವೀರಸಾಗರ ಮಂಜುನಾಥ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪೋಟೋ 8 * 9 : ನೆಲಮಂಗಲ ಪಟ್ಟಣದ ತಾಲೂಕು ಕಚೇರಿ ಸಮೀಪ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ರೈತ ಸ್ವಾಭಿಮಾನ ಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.