ನೃತ್ಯ ಪ್ರದರ್ಶನಗಳಿಂದ ಪ್ರೇಕ್ಷಕರ ಮನರಂಜಿಸಿದ ನವ್ಯ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿಯ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನೃತ್ಯ ವಿದುಷಿ ನವ್ಯ ಸತೀಶ್ ಭಂಡಾರಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಉಡುಪಿಯ ಶಾಂತಿನಿಕೇತನದ ವಿದುಷಿ ಲಕ್ಷ್ಮೀ ಗುರುರಾಜ್ ಉದ್ಘಾಟಿಸಿದರು.
ಉದ್ಯಮಿ ಎಂಜಿಎಂ ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ಗರ್ಡಿಕರ್, ಸತೀಶ್ ಬಿ., ನೂತನ್, ಪ್ರಸನ್ನ ಪ್ರಭು, ವಿದುಷಿ ನಯನಾ ಪ್ರಸನ್ನ ಇತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭ ಎಂ.ಟಿ. ಗಾಯನ, ಲಕ್ಷ್ಮೀನಾರಾಯಣ, ದೀಪಕ್ ಹೆಬ್ಬಾರ್, ರಾಘವೇಂದ್ರ ರಂಗಧೋಳ್ ಹಾಗೂ ನಯನಾ ಪ್ರಸನ್ನ ಮತ್ತು ಪ್ರಸನ್ನ ಪ್ರಭು ಅವರನ್ನು ನೃತ್ಯ ವಿದುಷಿ ನವ್ಯ ಭಂಡಾರಿ ಅವರ ಪಾಲಕರು ಗೌರವಿಸಿ ಸನ್ಮಾನಿಸಿದರು.ನವ್ಯ ಭಂಡಾರಿ ಬಾಲ್ಯದಿಂದಲೇ ನೃತ್ಯದತ್ತ ಅಪಾರ ಆಸಕ್ತಿ ಹೊಂದಿದ್ದು, ಏಳನೇ ವಯಸ್ಸಿನಿಂದ ಭರತನಾಟ್ಯ ಅಭ್ಯಾಸ ಆರಂಭಿಸಿದರು. ಪ್ರಾರಂಭದಲ್ಲಿ ಸ್ಮಿತಾ ನಾಯಕ್ ಅವರಲ್ಲಿ ಜೂನಿಯರ್ ಹಂತದ ತರಬೇತಿ ಪಡೆದು, ಬಳಿಕ ಝೇಂಕಾರ ಕಲಾ ಸಂಸ್ಥೆಯಲ್ಲಿ ನೃತ್ಯ, ಸಂಗೀತ ಹಾಗೂ ಚಿತ್ರಕಲೆಯನ್ನು ಅಭ್ಯಾಸಿಸಿದರು. ನೃತ್ಯ ಗುರು ವಿದುಷಿ ನಯನಾ ಪ್ರಸನ್ನ ಪ್ರಭು ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಸೀನಿಯರ್ ಹಾಗೂ ವಿದ್ವತ್ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ, ಮುಂಬೈ ನಡೆಸುವ ವಿಶಾರದ ಹಾಗೂ ಅಲಂಕಾರ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ್ ಎಂ.ಟಿ. ಗಾಯನ, ನಯನಾ ಪ್ರಸನ್ನ ನಟುವಾಂಗ, ಲಕ್ಷ್ಮೀನಾರಾಯಣ ಮೃದಂಗ, ದೀಪಕ್ ಹೆಬ್ಬಾರ್ ಕೊಳಲು ಹಾಗೂ ರಾಘವೇಂದ್ರ ರಂಗಧೋಳ್ ಶಿವಮೊಗ್ಗ ರಿದಮ್ ಪ್ಯಾಡ್‌ನೊಂದಿಗೆ ಸಹಕಾರ ನೀಡಿದರು. ನವ್ಯ ಭಂಡಾರಿ ನೃತ್ಯ ಪ್ರದರ್ಶನ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.