ರೈತ ಸಂಘದ ಕಾಳಿಹುಂಡಿ ಗ್ರಾಮ ಘಟಕ ಉದ್ಘಾಟನೆ

| Published : Sep 23 2024, 01:18 AM IST

ಸಾರಾಂಶ

ಬಹುರಾಷ್ಟ್ರೀಯ ಕಂಪನಿಗಳು ನೀಡಿದ ಬಿತ್ತನೆ ಬೀಜ ಫಲ ಕೊಟ್ಟ ನಂತರ ಅದರ ಬೀಜದಿಂದ ಮತ್ತೆ ಫಸಲು ಬೆಳೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ನಂಜನಗೂಡು

ರೈತರು ಅತಿವೃಷ್ಟಿ, ಅನಾವೃಷ್ಟಿಗಳ ತಾಕಲಾಟದಲ್ಲಿ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ದೊರಕದೆ ಮೋಸಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರಗಳು ರೈತರ ವಿರುದ್ದ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.

ತಾಲೂಕಿನ ಕಾಳಿಹುಂಡಿ ಗ್ರಾಮದಲ್ಲಿ ಭಾನುವಾರ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳು ನೀಡಿದ ಬಿತ್ತನೆ ಬೀಜ ಫಲ ಕೊಟ್ಟ ನಂತರ ಅದರ ಬೀಜದಿಂದ ಮತ್ತೆ ಫಸಲು ಬೆಳೆಯುವುದಿಲ್ಲ. ರೈತರು ಮತ್ತೆ ಬಹುರಾಷ್ಟ್ರೀಯ ಕಂಪನಿಗಳ ಬಳಿ ಬಿತ್ತನೆ ಬೀಜಕ್ಕಾಗಿ ಕೈ ಒಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಬಹುರಾಷ್ಟ್ರೀಯ ಕಂಪನಿಗಳು ವಿತರಿಸಿದ ಬಿತ್ತನೆ ಬೀಜಗಳಿಂದ ನೆಲ ಬರಡಾಗುತ್ತಿದೆ. ಇಂದು ತಿರುಪತಿ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರಸಿದ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಆದರೆ ಅನ್ನ ನೀಡುವ ರೈತರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದರು.

ರೈತರ ಸಮಸ್ಯೆಗಳ ಬಗ್ಗೆ ಪ್ರೊ. ನಂಜುಂಡಸ್ವಾಮಿ ಹುಟ್ಟುಹಾಕಿದ ರೈತ ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ. ರೈತ ಸಂಘದ ಹೋರಾಟಕ್ಕೆ ಜನತೆ ಬೆಂಬಲ ನೀಡಬೇಕು ಎಂದು ಅವರು ಕೋರಿದರು.

ಸಂಘದ ತಾಲೂಕು ಅಧ್ಯಕ್ಷ ಸತೀಶ್ರಾವ್‌, ಮುಖಂಡರಾದ ಮಂಜುಕಿರಣ್‌, ಮಹದೇವು, ಅತ್ತಹಳ್ಳಿ ಶಿವಕುಮಾರ್‌, ಕೆಂಪಣ್ಣ, ಶಿವಣ್ಣ, ಶೈಲಜಾ, ಮೋಹನ್‌, ಸಿಂಧೂ ಮೊದಲಾದವರು ಇದ್ದರು.