ಕಂಪ್ಲಿ: ಪಟ್ಟಣದ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಶಾಲೆಯ ವಿದ್ಯಾರ್ಥಿನಿ ಎಂ. ಜುಹಾ ಫಾತಿಮಾ 625ಕ್ಕೆ 620 ಅಂಕಗಳನ್ನು ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ತಾಲೂಕಿಗೆ ಅಪಾರ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆ ಸ್ಥಳೀಯ ಶಿಕ್ಷಣ ವಲಯದಲ್ಲಿ ಸಂತಸ ಮೂಡಿಸಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಶಾಲೆಯ ಒಟ್ಟಾರೆ ಫಲಿತಾಂಶವೂ ಉತ್ತಮವಾಗಿದ್ದು, ಪರೀಕ್ಷೆಗೆ ಹಾಜರಾದ 81 ವಿದ್ಯಾರ್ಥಿಗಳಲ್ಲಿ 46 ಮಂದಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 5 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 5 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಫಲಿತಾಂಶ ಶೇಕಡಾವಾರು ಉತ್ತಮ ಮಟ್ಟದಲ್ಲಿದ್ದು, ಕೇವಲ 1 ವಿದ್ಯಾರ್ಥಿ ಮಾತ್ರ ಅನುತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ.ವಿಷಯವಾರು ಸಾಧನೆಯಲ್ಲಿಯೂ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದ್ವಿತೀಯ ಭಾಷೆ ಕನ್ನಡದಲ್ಲಿ 19 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿರುವುದು ವಿಶೇಷ. ತೃತೀಯ ಭಾಷೆ ಹಿಂದಿಯಲ್ಲಿ 14 ಮಂದಿ ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಸಮಾಜ ವಿಜ್ಞಾನ ವಿಷಯದಲ್ಲಿಯೂ ಓರ್ವ ವಿದ್ಯಾರ್ಥಿ ಪೂರ್ಣ ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾನೆ. ನಿವೇದಿತಾ 612 (ಶೇ.97.92), ಎಚ್.ಕಾರ್ತಿಕ್ 611 (ಶೇ.97.76), ವಿವೇಕ್ 608 (ಶೇ.97.28), ಮಹ್ಮದ್ ರಿಹಾನ್ 608 (ಶೇ.97.28), ಕೆ.ಮೋಹಿತ್ ಚೌದರಿ 608 (ಶೇ.97.28) ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ.ಈ ಕುರಿತು ಶಾಲೆಯ ಪ್ರಾಚಾರ್ಯ ಪಿ. ನಾಗೇಶ್ವರರಾವ್ ಹಾಗೂ ಉಪ ಪ್ರಾಚಾರ್ಯ ಸಾಯಿ ಕಿಶೋರ್ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಿತ ಬೋಧನೆ ಮತ್ತು ಪೋಷಕರ ಸಹಕಾರದಿಂದಲೇ ಈ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ನಮ್ಮ ಶಾಲೆಯು ಪ್ರತಿವರ್ಷವೂ ಉತ್ತಮ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದು, ಈ ಬಾರಿಯ ಫಲಿತಾಂಶವು ನಮ್ಮ ಶ್ರಮಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸಿ ರಾಜ್ಯ ಮಟ್ಟದಲ್ಲಿಯೂ ಅಗ್ರ ಸ್ಥಾನ ಗಳಿಸುವತ್ತ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.