ಸಾರಾಂಶ
ಕವಿತಾಳ ಪಟ್ಟಣದಲ್ಲಿ ಕಲುಷಿತ ನೀರು ಪೂರೈಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣದಲ್ಲಿ ಕಲುಷಿತ ನೀರು ಪೂರೈಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ.ಇಲ್ಲಿನ 16 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸುವ ಸಮೀಪದ 73 ಕ್ಯಾಂಪ್ ಹತ್ತಿರದ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ತಳಮಟ್ಟದ ಕಲುಷಿತ ನೀರು ಪೂರೈಕೆ ಮಾಡಲಾಗಿತ್ತು. ನೀರು ದುರ್ವಾಸನೆ ಬೀರುತ್ತಿದೆ ರೋಗ ಹರಡುವ ಭೀತಿ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.
ಗುರುವಾರ ಕೆರೆ ಮತ್ತು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿದ್ದ ಜಿಪಂ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್ 24 ಗಂಟೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸವುದಾಗಿ ಭರವಸೆ ನೀಡಿದ್ದರು, ಆದಾಗ್ಯೂ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಜಿಲ್ಲಾ ಪಂಚಾಯಿತಿ ವಾಹನ ಬಂದಿದ್ದು ಅದರಲ್ಲಿ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ಬರುತ್ತಿದ್ದಂತೆ ಖಾಲಿ ಕೊಡ ಹಿಡಿದ ಜನರು ನೀರಿಗಾಗಿ ಮುಗಿಬಿದ್ದ ದೃಶ್ಯ ಕಂಡು ಬಂತು.