ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಳೆಗಾಲ ಆರಂಭವಾಗಿದ್ದು, ದಿನೆ ದಿನೆ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಆತಂಕದಲ್ಲಿದ್ದಾರೆ ಎಂದು ಜು.9ರಂದು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೇ ಅಧಿಕಾರಿವರ್ಗ ಎಚ್ಚೆತ್ತುಕೊಂಡಿದೆ. ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಜನರನ್ನು ಜಾಗೃತಿ ಮೂಡಿಸುವುದು ಹಾಗೂ ಡೆಂಘೀ ಬಗ್ಗೆ ತಿಳಿವಳಿಕೆ ಹೇಳುವ ಕಾರ್ಯ ಭರದಿಂದ ಸಾಗಿದೆ.ಫೀಲ್ಡ್‌ಗಿಳಿದ ಆಡಳಿತ ವರ್ಗ:
ಪಾಲಿಕೆ ಆಡಳಿತ ವರ್ಗವೇ ನಗರದ ವಿವಿಧ ಬಡಾವಣೆಗಳಲ್ಲಿ ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ, ಮಹಾನಗರ ಪಾಲಿಕೆ ಮಹಾಪೌರರಾದ ಮಹೇಜಬಿನ ಹೊರ್ತಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಂಡವೇ ನಗರದ ವಿವಿಧೆಡೆ ಭೇಟಿ ನೀಡಿ ಬಡಾವಣೆಗಳಲ್ಲಿನ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿತು.ಮನೆಮನೆಗೆ ತೆರಳಿ ಲಾರ್ವಾ ಉತ್ಪತ್ತಿಯಾಗುವ ಕುರಿತು ಜಾಗೃತಿ ಕಾರ್ಯ ಮೂಡಿಸಲಾಗಿದೆ. ಡೆಂಘೀ ಕುರಿತು ಭಿತ್ತಿಪತ್ರ ಹಂಚಿಕೆ ಮಾಡಲಾಗಿದೆ. ಜ್ವರ, ತಲೆನೋವಿನಿಂದ ಬಳಲುತ್ತಿರುವವರು ಕಂಡುಬಂದಲ್ಲಿ ಅಂತಹವರ ರಕ್ತದ ಮಾದರಿ ಸಂಗ್ರಹ ಕಾರ್ಯ ನಡೆದಿದೆ. ಮನೆಗಳಲ್ಲಿ ನೀರು ಸಂಗ್ರಹ ಮಾಡಿರುವ ಟ್ಯಾಂಕ್ ಹಾಗೂ ಬ್ಯಾರಲ್‌ಗಳಲ್ಲಿ ಲಾರ್ವಾ ನಾಶಕ್ಕೆ ಔಷಧ ಹಾಕುವ ಕೆಲಸ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಬಳಸಿಕೊಂಡು ಉತ್ತಮ ಮೂಡಿಸುವ ಕಾರ್ಯ ನಡೆದಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಡೆಂಘೀ ಹಾಗೂ ಇತರೆ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ಕ್ರಿಮಿನಾಶಕ ಸಿಂಪರಣೆ (ಸ್ಪ್ರೇ) ಮಾಡಲಾಯಿತು. ಸೊಳ್ಳೆ ಸಂತತಿ ಲಾರ್ವಾ ಕ್ರಿಮಿ ಇರುವಲ್ಲಿ ಕ್ರಿಮಿನಾಶಕ ಸಿಂಪರಣೆ ಮಾಡಲಾಯಿತು.-------------
ಕೋಟ್.....ರಾಜ್ಯಾದ್ಯಂತ ಡೆಂಘೀ ಹಾವಳಿ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ 700ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶುದ್ಧ ನೀರು ಇರುವ ಸಣ್ಣಪುಟ್ಟ ಸ್ಥಳದಲ್ಲೇ ಡೆಂಘೀ ಜ್ವರ ತರುವ ಈಡೀಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಹಾಗಾಗಿ ತೆಂಗಿನ ಚಿಪ್ಪು, ಸಂಗ್ರಹಿಸಿಟ್ಟ ನೀರಿನ ತೊಟ್ಟಿ, ಡ್ರಮ್‌ಗಳು, ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಟೈರ್ ಟ್ಯೂಬ್‌ಗಳು, ನೀರು ನಿಲ್ಲಲು ಅವಕಾಶ ಇರುವ ತಾಣಗಳೆ ಈಡೀಸ್ ಸೊಳ್ಳೆಗಳ ಉಗಮ ತಾಣವಾಗಿದೆ. ಆದ್ದರಿಂದ ಮನೆಯೊಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು 32ನೇ ವಾರ್ಡ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
- ಶಿವರುದ್ರ ಬಾಗಲಕೋಟ, ಪಾಲಿಕೆ ಸದಸ್ಯ.ಡೆಂಘೀ ಹಾವಳಿ ಹೆಚ್ಚಾಗಿದ್ದು, ಬಡಾವಣೆಗಳಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಗೆ ಹೆದರುವಂತಾಗಿತ್ತು. ಆದರೆ ಕನ್ನಡಪ್ರಭ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರು ನಿಲ್ಲುವ ಪ್ರದೇಶಗಳು ಹಾಗೂ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ, ಕ್ರಮ ಕೈಗೊಂಡಿದ್ದು ಸಂತಸ ತಂದಿದೆ.
- ಕಲ್ಪನಾ.ಎಸ್. ಶಿಕ್ಷಕಿ.