ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಬಿರುಸಿನ ಮತದಾನ ನಡೆಯಿತು. ಶಿಕ್ಷಕರು ಅತ್ಯುತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು. ಮತ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದರೊಂದಿಗೆ ಮತದಾನಕ್ಕೆ ಬಿರುಸು ನೀಡಿದರು.ಚುನಾವಣೆ ಪ್ರಯುಕ್ತ ಮಂಡ್ಯ ನಗರದಲ್ಲಿ ತಾಲೂಕು ಕಚೇರಿಯಲ್ಲಿ ಎರಡು ಕೊಠಡಿ ಹಾಗೂ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಒಂದು ಕೊಠಡಿ ಸೇರಿ ಮೂರು ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಮತದಾನದ ಸಮಯ ಆರಂಭವಾದ ಕೆಲವೇ ಸಮಯದಲ್ಲಿ ತಂಡೋಪ ತಂಡವಾಗಿ ಆಗಮಿಸಿದ ಶಿಕ್ಷಕ ಮತದಾರರು ಗುರುತಿನ ಚೀಟಿಯೊಂದಿಗೆ ಮತಕೇಂದ್ರಗಳಿಗೆ ತೆರಳಿ ಮತ ಹಕ್ಕು ಚಲಾಯಿಸಿದರು.
ಮತಗಟ್ಟೆಗಳ ಎದುರು ಕಾಂಗ್ರೆಸ್, ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಮುಖಂಡರು- ಕಾರ್ಯಕರ್ತರು ಸೇರಿದ್ದರು. ಅವರೆಲ್ಲರೂ ಮತ ಹಾಕಲು ಬರುವ ಶಿಕ್ಷಕರಿಗೆ ಕರಪತ್ರ ನೀಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡುಬರುತ್ತಿದ್ದವು. ಪಕ್ಷಗಳ ಮುಖಂಡರು ನೀಡುತ್ತಿದ್ದ ಕರಪತ್ರಗಳನ್ನು ಸ್ವೀಕರಿಸುತ್ತಿದ್ದ ಶಿಕ್ಷಕರು ಮತಗಟ್ಟೆಗೆ ತೆರಳಿ ತಾವು ಬಯಸಿದ ಅಭ್ಯರ್ಥಿ ಪರವಾಗಿ ಹಕ್ಕು ಚಲಾಯಿಸಿ ವಾಪಸಾಗುತ್ತಿದ್ದರು.ಮಂಡ್ಯ ನಗರ ಮತ ಕೇಂದ್ರಗಳ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಮುಖಂಡರು-ಕಾರ್ಯಕರ್ತರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಪಕ್ಷದ ಚಿಹ್ನೆಯನ್ನೊಳಗೊಂಡ ಶಾಲುಗಳನ್ನು ಧರಿಸಿ ಶಿಕ್ಷಕ ಮತದಾರರ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದರು.
ಮತಗಟ್ಟೆ ಬಳಿ ನಿಗದಿತ ಗಡಿ ದಾಟಿ ಒಳಬಂದು ಶಿಕ್ಷಕರನ್ನು ಭೇಟಿಯಾಗುತ್ತಿದ್ದ ರಾಜಕೀಯ ಪಕ್ಷಗಳ ಮುಖಂಡರು- ಕಾರ್ಯಕರ್ತರನ್ನು ಪೊಲೀಸರು ಹೊರಗೆ ಕಳುಹಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಒಂದೆಡೆ ಮತದಾನ ಬಿರುಸಾಗಿ ನಡೆಯುತ್ತಿದ್ದರೆ ಮತ್ತೊಂದೆಡೆ ರಾಜಕೀಯ ಪಕ್ಷದವರ ಪ್ರಚಾರವೂ ಬಿರುಸನ್ನು ಪಡೆದುಕೊಂಡಿದ್ದು ವಿಶೇಷವಾಗಿತ್ತು.ಪ್ರತಿಷ್ಠೆಯಾಗಿ ಪರಿಗಣಿಸಿದ ರಾಜಕೀಯ ಪಕ್ಷಗಳ ನಾಯಕರುಕನ್ನಡಪ್ಪರಭ ವಾರ್ತೆ ಮಂಡ್ಯ
ಸದ್ದಿಲ್ಲದೇ ನಡೆದುಹೋಗುತ್ತಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆ ಎಂಬಂತೆ ಗೋಚರಿಸಿತು. ಕೆಲ ಸ್ಥಳೀಯ ಹಾಗೂ ಶಿಕ್ಷಕ ಮುಖಂಡರ ಸಮ್ಮುಖದಲ್ಲಿ ನಡೆದು ಹೋಗುತ್ತಿದ್ದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಮತಗಟ್ಟೆ ಎದುರು ನಿಂತು ಪ್ರಚಾರ ನಡೆಸಿದ್ದು ಗಮನಾರ್ಹವಾಗಿತ್ತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನಗರಸಭಾ ಸದಸ್ಯ ಎಂ.ಎನ್.ಶ್ರೀಧರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ನಗರಾಧ್ಯಕ್ಷ ರುದ್ರಪ್ಪ, ಜಿಲ್ಲಾ ಮಹಿಳಾಧ್ಯಕ್ಷೆ ಅಂಜನಾ ಮತಗಟ್ಟೆ ಬಳಿ ಮತಯಾಚಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ವಿವೇಕಾನಂದ ಪರ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರ, ಎಚ್.ಕೆ.ರಾಮು, ಸಿದ್ದರಾಮೇಗೌಡ, ಬೂದನೂರು ಸ್ವಾಮಿ, ಬಿಜೆಪಿ ಪರವಾಗಿ ನಗರಾಧ್ಯಕ್ಷ ವಸಂತಕುಮಾರ್, ವಿವೇಕ್, ಕೇಶವ ಸೇರಿದಂತೆ ಇನ್ನಿತರ ಮಹಿಳಾ ಕಾರ್ಯಕರ್ತೆಯರು ಮತಗಟ್ಟೆ ಬಳಿ ನೆರೆದು ಪ್ರಚಾರ ನಡೆಸಿದರು. ಮತಗಟ್ಟೆಗೆ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಆಗಮಿಸಿ ಮತದಾನದ ಬಗ್ಗೆ ಮುಖಂಡರು- ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು.ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಹ.ರ.ಮಹೇಶ್ ಪರ ಪಕ್ಷದ ಅಭ್ಯರ್ಥಿ ಪರ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹಾಗೂ ಜಿಲ್ಲಾ ಮುಖಂಡರು ಮತಯಾಚನೆ ಮಾಡಿದರು.