೩೦, ೩೧ರಂದು ಉಪ್ಪಿನಂಗಡಿ ‘ವಿಜಯ -ವಿಕ್ರಮ ಜೋಡುಕರೆ’ ಉಬರ್ ಕಂಬಳ ಉತ್ಸವ

| Published : Mar 17 2024, 02:00 AM IST

೩೦, ೩೧ರಂದು ಉಪ್ಪಿನಂಗಡಿ ‘ವಿಜಯ -ವಿಕ್ರಮ ಜೋಡುಕರೆ’ ಉಬರ್ ಕಂಬಳ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಸುಮಾರು ೧೬೦ ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು ಅನೇಕ ಗಣ್ಯಾತಿಗಣ್ಯರು. ಖ್ಯಾತ ಚಲನ ಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ. ಅಲ್ಲದೆ ಸಸ್ಯಮೇಳ, ಆಹಾರಮೇಳ, ಕೃಷಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ

ಕನ್ನಡಪ್ರಭ ವಾರ್ತೆ ಪುತ್ತೂರು

೩೮ನೇ ವರ್ಷದ ಉಪ್ಪಿನಂಗಡಿ ‘ವಿಜಯ- ವಿಕ್ರಮ ಜೋಡುಕರೆ ಕಂಬಳ’ ಉಬರ್ ಕಂಬಳ ಉತ್ಸವ ಮಾ.೩೦ ಮತ್ತು ೩೧ರಂದು ನಡೆಯಲಿದ್ದು, ಮಾ.೩೦ರಂದು ಬೆಳಗ್ಗೆ ೧೦.೩೧ಕ್ಕೆ ಕೂಟೇಲು ನದಿ ಕಿನಾರೆಯಲ್ಲಿರುವ ಕಂಬಳ ಕರೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಉದ್ಘಾಟಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಅವರು ಶನಿವಾರ ಶಾಸಕರ ಕಚೇರಿಯಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಬಳಿಕ ಮಾಧ್ಯಾಮಗಳೊಂದಿಗೆ ಮಾತನಾಡುತ್ತಾ ಮಾ.೩೦ರಂದು ಬೆಳಗ್ಗೆ ೮.೩೦ಕ್ಕೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಗೆ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಚಾಲನೆ ನೀಡಲಿರುವರು. ಕಂಬಳದ ಸಭಾ ಕಾರ್ಯಕ್ರಮ ಸಂಜೆ ೬ರಿಂದ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿರುವರು. ಸಭಾಪತಿ ಯು. ಟಿ. ಖಾದರ್, ಯೋಜನಾ ಸಬಲೀಕರಣ ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವ ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಉದ್ಯಮಿ ಬಾಬುರಾಜ್, ಸಂಗೀತ ನಿರ್ದೇಶಕ ಗುರುಕಿರಣ್, ನಾಡೋಜ ಡಾ.ಬಿ. ಶಂಕರ್, ಅಧ್ಯಕ್ಷರು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ರಿ., ಸಹಕಾರ ರತ್ನ ಎಂ. ಎನ್. ರಾಜೇಂದ್ರ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿವೆ. ಅಲ್ಲದೆ ವಿಜೇತ ಕೋಣಗಳ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿ ಚೆನ್ನಯ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಬ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿರುತ್ತೇವೆ. ಅಲ್ಲದೆ ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ, ಉತ್ತಮ ಕರೆ ನಿರ್ಮಾಣ. ಕರೆಗೆ ಶುದ್ಧ ನೀರಿನ ವ್ಯವಸ್ಥೆ, ಸುಸಜ್ಜಿತ ಸ್ವಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ವರ್ಷಕ್ಕೊಂದು ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಟ ಕಂಬಳ ಎಂಬ ಹೆಸರನ್ನು ಪಡೆದಿದೆ ಎಂದರು.

ಉಬಾರ್ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ಎನಿಸಿದೆ. ಈ ವರ್ಷ ಸುಮಾರು ೧೬೦ ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದ್ದು ಅನೇಕ ಗಣ್ಯಾತಿಗಣ್ಯರು. ಖ್ಯಾತ ಚಲನ ಚಿತ್ರ ನಟ-ನಟಿಯರು ಭಾಗವಹಿಸಲಿದ್ದಾರೆ. ಅಲ್ಲದೆ ಸಸ್ಯಮೇಳ, ಆಹಾರಮೇಳ, ಕೃಷಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.

ಈ ಬಾರಿ ಉಬಾರ್ ಕಂಬಳ ಉತ್ಸವವನ್ನು ಆಯೋಜಿಸಲಾಗಿದೆ. ಸಾಂಸ್ಕತಿಕ ಕಾರ್ಯಕ್ರಮ, ಸ್ವಾಧಿಷ್ಟ ಆಹಾರ ಮೇಳ, ಬೋಟಿಂಗ್ ರೈಡ್, ಕೃಷಿ ಮೇಳ, ವ್ಯವಹಾರ ಮೇಳ, ಮಕ್ಕಳ ಮನೋರಂಜನಾ ಆಟಗಳನ್ನು ಮಾ.೨೯, ೩೦, ೩೧ರಂದು ಕಂಬಳ ಕರೆಯ ಬಳಿಯಲ್ಲೇ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿ ಪ್ರಮುಖರಾದ ಉಮೇಶ್ ಶೆಣೈ, ನಿರಂಜನ್ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಉಬಾರ್ ಕಂಬಳ ಉತ್ಸವದ ಸೈಫ್, ರಾಜೇಶ್ ಇದ್ದರು.