ಸಾರಾಂಶ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎನ್.ಎ. ಮತ್ತು ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪದ್ಮನಾಭ ಸೊರಂಜಾ ಅವರನ್ನು ವಿವೆಕಾನಂದ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ಕಾರ್ಗಿಲ್ ವಿಜಯ-ಯೋಧ ನಮನ ಕಾರ್ಯಕ್ರಮ ನಡೆಯಿತು.ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ. ಕೆ.ಎನ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸವು ಕೇವಲ ಸಂಭ್ರಮಾಚರಣೆಯಲ್ಲ, ಬದಲಿಗೆ ಹಗಲು-ಇರುಳು, ಮಳೆ-ಗಾಳಿ ಎನ್ನದೆ ಗಡಿ ಕಾಯುವ ಯೋಧರ ಬಲಿದಾನವನ್ನು ಸ್ಮರಿಸುವ ಅಪೂರ್ವ ಸಂದರ್ಭವಾಗಿದೆ. ಸೈನಿಕರು ಕೇವಲ ಹೊಟ್ಟೆಪಾಡಿಗಾಗಿ ಸೈನ್ಯ ಸೇರುತ್ತಾರೆ ಎಂಬ ಮೂರ್ಖತನದ ಹೇಳಿಕೆ ಸಲ್ಲದು. ಈ ದೇಶದ ಪ್ರತಿಯೊಬ್ಬ ಭಾರತೀಯನಿಗೂ ತಾವು ಜನ್ಮವೆತ್ತ ಈ ನಾಡಿನ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಇರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎನ್.ಎ. ಮತ್ತು ನಿವೃತ್ತ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪದ್ಮನಾಭ ಸೊರಂಜಾ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.ಕಾಲಾಜು ಪ್ರಾಂಶುಪಾಲ ದೇವಿಚರಣ್ ರೈ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶೈಕ್ಷಣಿಕ ಸಂಯೋಜಕ ಶ್ರೀವತ್ಸ ಎನ್. ವಂದಿಸಿದರು. ಉಪನ್ಯಾಸಕಿ ಉಷಾ ಎ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.