ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನವರಾತ್ರಿಯಲ್ಲಿ ಒಂಭತ್ತು ದಿನಗಳ ಕಾಲ ನಿರಂತರವಾಗಿ ನಾಡದೇವಿಯ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದ ಮಹಿಳೆಯರೆಲ್ಲ ಅದ್ಧೂರಿಯಿಂದ ವಿಜಯದಶಮಿ ಆಚರಿಸಿದರು. ಶನಿವಾರ ಜಿಲ್ಲೆಯ ಜನರು ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿನ್ನಲೆಯಲ್ಲಿ ನಗರದ ಮಾರುಕಟ್ಟೆಯಲ್ಲಿ ಹಣ್ಣು, ಹೂ, ಹಾರ, ತೆಂಗಿನಕಾಯಿ, ಕುಂಬಳಕಾಯಿ, ಬನ್ನಿ, ಬಾಳೆಗಿಡಗಳು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರು.ನವರಾತ್ರಿಯ ಸಂಭ್ರಮಅ. 3ರಿಂದ ಆರಂಭವಾದ ದಸರಾ ಹಬ್ಬವನ್ನು ನಿತ್ಯದ ಪೂಜೆ ಪುನಸ್ಕಾರಗಳೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದೆ. ನಗರದೆಲ್ಲೆಡೆ ದೇವಿಗಳನ್ನು ಪ್ರತಿಷ್ಠಾಪಿಸಿ ಮಹಿಳೆಯುರು ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಜೊತೆಗೆ ದೇವಿ ಉತ್ಸವವನ್ನು ನೋಡಲು ನಿತ್ಯ ಸಾಯಂಕಾಲ ಭಕ್ತರು ಆಗಮಿಸುತ್ತಿದ್ದರು. ಇನ್ನೊಂದೆಡೆ ನಿತ್ಯ ವಿವಿಧ ಬಣ್ಣಬಣ್ಣದ ಸೀರೆಗಳನ್ನುಟ್ಟ ನಾರಿಯರೆಲ್ಲ ನವದುರ್ಗೆಯರ ಆರಾಧನೆ ನಡೆಸಿದರು.
ನಿತ್ಯ ಬೆಳಗ್ಗೆ ಪೂಜೆಒಂಭತ್ತು ದಿನಗಳ ಕಾಲ ಉಪವಾಸ ಇರುವ ಹೆಣ್ಣುಮಕ್ಕಳು, ಮಹಿಳೆಯರೆಲ್ಲ ಸೇರಿ ಬೆಳಗಿನಜಾವ 4ಗಂಟೆಗೆ ಎದ್ದು ಮಡಿಯಿಂದ ನೈವೇದ್ಯ ತಯಾರಿಸಿಕೊಂಡು ಬನ್ನಿ ಮರಗಳಿಗೆ ತೆರಳಿ ಪೂಜೆ ಸಲ್ಲಿಸಿ ವೃತಗಳನ್ನು ಮಾಡುವ ಮೂಲಕ ದೇವಿಯನ್ನು ಆರಾಧಿಸುವುದು ವಿಶೇಷವಾಗಿತ್ತು.
ಬನ್ನಿ ಮುಡಿಯುವ ಹಬ್ಬಒಂಭತ್ತು ದಿನಗಳ ನಂತರ ಶನಿವಾರ ಎಲ್ಲಡೆ ಬನ್ನಿ ಮುಡಿಯುವ ಸಂಭ್ರಮ ಮನೆಮಾಡಿತ್ತು. ಬನ್ನಿ ಮರಗಳಿಗೆ ತೆರಳಿ ಬನ್ನಿ ತಂದು ಹಿರಿಯರಿಗೆಲ್ಲ ಕೊಟ್ಟು ಅವರ ಆಶೀರ್ವಾದ ಪಡೆಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿರಿಯರು, ಯುವಕರು, ಮಕ್ಕಳು ಸೇರಿದಂತೆ ಎಲ್ಲರೂ ಬನ್ನಿ ಮುಡಿಯುವ ಪದ್ಧತಿ ಮುಂದುವರಿದಿದ್ದು, ಎಲ್ಲರನ್ನು ಒಂದಾಗಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಬ್ಬಡಿಗೊಳಿಸಿದಂತೆ ಕಂಡು ಬಂದಿತು. ಓಣಿ ಓಣಿಗಳಲ್ಲಿ ನಾವು ನೀವು ಬನ್ನಿ ತಗೊಂಡು ಬಂಗಾರದಂಗೆ ಇರೋಣ ಎಂಬ ಮಾತನ್ನು ಹೇಳಿ ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯದ ವೈಶಿಷ್ಟವೇ ಬೇರೆ.
ಹೂ ವ್ಯಾಪಾರ ಜೋರುವಿಜಯದಶಮಿ ಹಬ್ಬಕ್ಕೆ ದೇವಿಗೆ ವಿಶೇಷವಾಗಿ ಅಲಂಕಾರ ಮಾಡುವುದರಿಂದ ಮಾರುಕಟ್ಟೆಯಲ್ಲಿ ಹೂವಿನ ಮಾರಾಟದ ಭರಾಟೆ ಜೋರಾಗಿತ್ತು. ಚಂಡು ಹೂ, ಸೇವಂತಿಗೆ ಹೂ ಸೇರಿದಂತೆ ನಾನಾ ಹೂವುಗಳನ್ನು ತಂದು ರೈತರು ಮಾರಾಟ ಮಾಡುವುದು ಕಂಡುಬಂದಿತು.
ಮಾರ್ಕೆಟ್‌ಗೆ ಬಂದ ಬನ್ನಿಮೊದಲೆಲ್ಲ ತೋಟಗಳಲ್ಲಿ, ಜಮೀನುಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತಿದ್ದ ಬನ್ನಿಯನ್ನು ತಂದು ಪರಸ್ಪರ ವಿನಿಮಯ ಮಾಡಲಾಗುತ್ತಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಮರಗಳೇ ಮಾಯವಾಗುತ್ತಿರುವುದರಿಂದ ಹೊಲದಲ್ಲಿನ ಬನ್ನಿ ಮರಗಳನ್ನು ತಂದು ಮಾರಾಟ ಮಾಡುತ್ತಿರುವ ದೃಶ್ಯ ಕಂಡುಬಂದಿತು. ₹ 50ಗೆ ₹ 100 ಒಂದಿಷ್ಟು ಗೊನೆ ಎಂಬಂತೆ ಮಾರಾಟ ಮಾಡುತ್ತಿರುವ ರೈತರು ಹಾಗೂ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಿದ್ದರು.
ಕಲರ್ ಸಾರಿಯಲ್ಲಿ ಮಿಂಚಿದ ನಾರಿಯರುಹಳದಿ, ಬಿಳಿ, ಕೆಂಪು, ಹಸಿರು, ನೀಲಿ ಎಂದು ನಿತ್ಯ ಒಂದೊಂದು ಸೀರೆಗಳಲ್ಲಿ ಮಿಂಚುತ್ತಿದ್ದ ನಾರಿಯರು ಇಂದು ಕಲರಫುಲ್ ಸಾರಿಗಳನ್ನು ಉಟ್ಟು ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಪ್ರಾರ್ಥಿಸಿದರು.ಕೋಟ್
ನಾಡದೇವಿ ಉತ್ಸವ ನಾರಿಯರಿಗೆ ಬಹಳ ಇಷ್ಟ. ವಿಶೇಷವಾಗಿ ಮಹಿಳೆಯರ ಹಬ್ಬವಾಗಿರುವ ಈ ನವರಾತ್ರಿಯಲ್ಲಿ ಪ್ರತಿದಿನ ಮುಂಜಾವಿನಲ್ಲಿ ಎದ್ದು ಮನೆ ಸ್ವಚ್ಛಗೊಳಿಸಿ ಓಣಿಯ ಮಹಿಳೆಯರು, ಯುವತಿಯರೆಲ್ಲ ಒಂದೆಡೆ ಸೇರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಾಡದೇವಿಯ ಆಧಾರಾಧನೆ ಮಾಡಲಾಯಿತು. ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಮತ್ತು ನಾಡಿಗೂ ಒಳಿತು ಮಾಡುವಂತೆ ನಾಡದೇವಿಗೆ ಪ್ರಾರ್ಥನೆ ಮಾಡಿದ್ದೇವೆ.ಕಾವೇರಿ ಭೈರಶೆಟ್ಟಿ, ಗೃಹಿಣಿ