ಗಣಿ ಜಿಲ್ಲೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮ

| Published : Oct 13 2024, 01:10 AM IST

ಸಾರಾಂಶ

ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ ಎಂದೇ ಹೇಳುವ ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.

ಬಳ್ಳಾರಿ: ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ ಎಂದೇ ಹೇಳುವ ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.

ಕಳೆದ ಒಂಬತ್ತು ದಿನಗಳಿಂದ ಶಕ್ತಿದೇವತೆಗೆ ವಿವಿಧ ಬಗೆಯಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದ ಭಕ್ತರು ವಿಜಯದಶಮಿ ದಿನ ಶ್ರೀಕನಕ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪುನೀತಗೊಂಡರು.

ಬೆಳಗಿನ ಜಾವ ಮಹಿಳೆಯರು ಬನ್ನಿ ಮರಗಳಿಗೆ ಪೂಜೆ ಸಲ್ಲಿಸಿ, ಉಡಿಅಕ್ಕಿ, ಸೀರೆ ಕುಪ್ಪಸ ಅರ್ಪಿಸಿ, ದೇವಿಗೆ ನಮಿಸಿದರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು. ದೇವಿ ಮೂರ್ತಿಯನ್ನು ಚಿನ್ನದ ಆಭರಣಗಳು ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದರು.ಪಟೇಲ್ ನಗರದಲ್ಲಿರುವ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯದಶಮಿ ವಿಶೇಷ ಪೂಜೆಗಳು ಜರುಗಿದವು.

ಬನ್ನಿಪತ್ರೆ ವಿನಿಮಯ

ವಿಜಯ ದಶಮಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಬನ್ನಿಪತ್ರೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು. ಬನ್ನಿ ತಗೊಂಡು ಬಂಗಾರದಂತೆ ಇರೋಣ ಎಂದು ಪರಸ್ಪರ ಶುಭಾಶಯ ಹೇಳಿಕೊಳ್ಳುವ ದೃಶ್ಯಗಳು ಕಂಡು ಬಂದವು.

ಹಿರಿಯರಿಗೆ ಕಿರಿಯರು ಬನ್ನಿಪತ್ರೆಯನ್ನು ನೀಡಿ ಆಶೀರ್ವಾದ ಪಡೆದರೆ, ಹಿರಿಯರು ಬನ್ನಿ ಹಬ್ಬದ ಶುಭ ಕೋರಿ ಹಾರೈಸಿದರು. ಗ್ರಾಮೀಣ ಪ್ರದೇಶದಲ್ಲೂ ವಿಜಯದಶಮಿ ಹಬ್ಬ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣರು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು. ಮಹಾನವಮಿ ದಿನವಾದ ಶುಕ್ರವಾರ ಆಯುಧಗಳು ಹಾಗೂ ವಾಹನಗಳ ಪೂಜೆ ಜರುಗಿದವು.

ಶ್ರದ್ಧಾ ಭಕ್ತಿಯಿಂದ ದಸರಾ ಆಚರಣೆ

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಶನಿವಾರ ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಗೊಂಡಿತು. ದಸರಾ ಅಂಗವಾಗಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ, ಮಾರೆಮ್ಮ ದೇವಸ್ಥಾನ, ಕಾಳಿಕಾ ಕಮಟೇಶ್ವರ ದೇವಸ್ಥಾನ, ನಿಮಿಷಾಂಬ ದೇವಸ್ಥಾನ, ಬನ್ನಿ ಮಹಾಂಕಾಳಿ ದೇವಸ್ಥಾನ ಸೇರಿದಂತೆ ಹಲವೆಡೆ ವಿಶೇಷ ಪೂಜೆಗಳು ಜರುಗಿದವಲ್ಲದೆ, ಬನ್ನಿ ಮುಡಿವ ಮೆರವಣಿಗೆಯೂ ಜರುಗಿತು.ಜನರು ಪರಸ್ಪರ ಬನ್ನಿ ನೀಡಿ ಶುಭ ಕೋರುವ ಮೂಲಕ ಹಬ್ಬವನ್ನು ಆಚರಿಸಿದರು.

ಕಾಳಮ್ಮ ದೇವಿ ರಥೋತ್ಸವ

ಇಲ್ಲಿನ ಸಕ್ಕರೆ ಕಾರ್ಖಾನೆಯ ಕಾಳಮ್ಮ ದೇವಸ್ಥಾನದಲ್ಲಿ ದಸರಾ ಹಬ್ಬದ ಕೊನೆಯ ದಿನವಾದ ಶನಿವಾರ ಸಂಜೆ ದೇವಿಯ ಮಹಾ ರಥೋತ್ಸವ ಅದ್ಧೂರಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಅಭಿಷೇಕ ಬಿಲ್ವಾರ್ಚನೆ, ಪುಷ್ಪಾರ್ಚನೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ರಥಕ್ಕೆ ಹೂ, ಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.