ಸಾರಾಂಶ
ನರಗುಂದ: ವಿಜಯದಶಮಿ ನಮಗೆಲ್ಲ ವಿಜಯದ ಹಬ್ಬವಾಗಿದೆ. ಎಲ್ಲ ಹಬ್ಬಗಳಲ್ಲಿ ಈ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ನಮ್ಮ ಧ್ಯೇಯ. ಧರ್ಮಿಷ್ಟರಿಗೆ ಜಯವಿದೆ. ಜಗತ್ತಿಗೆ ನಮ್ಮ ಶಕ್ತಿಯ ಕೂಗು ಕೇಳಬೇಕಾದರೆ ನಾವೆಲ್ಲ ಒಂದಾಗಬೇಕಾಗಿದೆ ಎಂದು ಸಂಘದ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ತಿಳಿಸಿದರು.ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಹಾಗೂ ವಿಜಯದಶಮಿ ಪ್ರಯುಕ್ತ ನಡೆದ ಗಣವೇಷಧಾರಿ ಸ್ವಯಂಸೇವಕರ ಪಥಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನಂ. 1 ಶಾಲಾ ಮೈದಾನದಲ್ಲಿ ಜರುಗಿದ ಸಮಾರಂಭದಲ್ಲಿ ಮಾತನಾಡಿ, ದೇಶದ ಒಂದಿಂಚೂ ಜಾಗದಲ್ಲಿ ಸಂಘದ ಭಗವಾ ಧ್ವಜ ಹಾರಾಡಲಿಕ್ಕೆ ಬಿಡಲ್ಲ ಎಂದು ಹೇಳಿದ ಮೊದಲ ಪ್ರಧಾನಿ ನೆಹರು ಅವರೇ ಕೊನೆಗೆ ಸಂಘಕ್ಕೆ ಶರಣಾಗಬೇಕಾಯಿತು ಎಂದರು.ಸಂಘದ ಮೇಲೆ ಗಾಂಧಿ ಹತ್ಯೆ ಆರೋಪ ಬಂದಾಗ, ಸ್ವಯಂಸೇವಕರ ಮೇಲೆ ದಾಳಿ, ಮನೆಗಳ ದ್ವಂಸ, ನಿಷೇಧ, ಸ್ವಯಂಸೇವಕರ ಜೈಲುವಾಸ ಹೀಗೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ ಸಂಘವು ತನ್ನ ನಡಿಗೆಯನ್ನು ಎಲ್ಲಿಯೂ ನಿಲ್ಲಿಸಿಲ್ಲ ಎಂದರು. ವೀರ ಸಾವರ್ಕರ್, ಡಾ. ಬಿ.ಆರ್. ಅಂಬೇಡ್ಕರ್, ಸುಭಾಸಚಂದ್ರ ಭೋಸ್ ಇವರೆಲ್ಲರಿಗೂ ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ್ದೆ ಕಾಂಗ್ರೆಸ್. ಸಂವಿಧಾನಕ್ಕೆ ಅವಮಾನ ಮಾಡಿದ್ದೆ ಕಾಂಗ್ರೆಸ್ ಎಂದರು.ಸಂಘವು 1.30 ಲಕ್ಷ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. 600 ಅನಾಥಾಶ್ರಮ ನಡೆಸುತ್ತಿದೆ. ನೂರಾರು ಸಂಘದ ಶಾಲೆಗಳಿವೆ. ಹೀಗೆ ನೂರಕ್ಕೂ ಹೆಚ್ಚು ಪರಿವಾರವನ್ನು ಹೊಂದಿದೆ. ದೇಶದ ಅನೇಕ ಸಮಸ್ಯೆಗಳನ್ನು ಸಂಘ ಪರಿಹರಿಸಿದೆ. ಭಾರತ ಪರಮ ವೈಭವದ ಸ್ಥಿತಿಯನ್ನು ಹೊಂದುವುದೇ ಸಂಘದ ಗುರಿಯಾಗಿದೆ. ಅದಕ್ಕಾಗಿ ಸಂಘ ಶತಾಬ್ದಿ ಸಂದರ್ಭದಲ್ಲಿ ಪಂಚ ಪರಿವರ್ತನೆ ಕಾರ್ಯಗಳಾದ ಸಂಸ್ಕಾರಯುತ ಕುಟುಂಬ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ನಾಗರಿಕರಿಗೆ ಶಿಷ್ಟಾಚಾರ ಪಾಲನೆ, ಸ್ವದೇಶಿ ಜೀವನಶೈಲಿ, ಹೀಗೆ ಎಲ್ಲ ಕಾರ್ಯಗಳನ್ನು ಮಾಡಲು ಸಂಘ ಹೊರಟಿದೆ ಎಂದರು.ಅತಿಥಿ ಮಂಜಣ್ಣ ಕೋರಿ ಮಾತನಾಡಿ, ರಾಷ್ಟ್ರದ ಜನತೆಗೆ ಸಂಘದ ಅವಶ್ಯಕತೆ ತುಂಬಾ ಇದೆ. ಸಂಘವೆಂದರೆ ಸ್ವರ್ಗವಿದ್ದಂತೆ ಎಂದರು.ಸಂಘ ಶತಾಬ್ದಿ ಪಥಸಂಚಲನದ ಮಾರ್ಗದುದ್ದಕ್ಕೂ ಪಟ್ಟಣದೆಲ್ಲೆಡೆ ರಸ್ತೆಯಲ್ಲಿ ರಂಗೋಲಿ ಹಾಗೂ ಹೂವುಗಳಿಂದ ಅಲಂಕಾರ, ಭಗವಾ ಧ್ವಜಗಳ ಹಾರಾಟ, ಅಲ್ಲಲ್ಲಿ ಅನೇಕ ವೃತ್ತಗಳಲ್ಲಿ ಮಹಾಪುರುಷರ ಛದ್ಮವೇಷ ಧರಿಸಿ ಪುಟಾಣಿ ಮಕ್ಕಳ ವೇದಿಕೆ ಕಂಡುಬಂದವು. ಭಗವಾಧ್ವಜ ಹಿಡಿದ ಸ್ವಯಂಸೇವಕರ ಸಂಚಲನದ ಮೇಲೆ ಸಾರ್ವಜನಿಕರಿಂದ ಪುಷ್ಪಗಳ ಅರ್ಪಣೆ ಎಲ್ಲೆಂದರಲ್ಲಿ ಕಂಡುಬಂದಿತು.ಕಾರ್ಯಕ್ರಮದ ಮುಂಭಾಗದಲ್ಲಿ ಸ್ಥಳೀಯ ಶಾಸಕ ಸಿ. ಸಿ. ಪಾಟೀಲ, ಪುರಸಭೆ ಜನಪ್ರತಿನಿಧಿಗಳು ತಾಲೂಕು ಸಂಘಚಾಲಕ ಮಂಜುನಾಥ ಬೆಳಗಾವಿ, ಸಂಜಯ ನೆಲವಡಿ ಇತರರು ಇದ್ದರು.