ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಅನುದಾನಕ್ಕೆ ಕತ್ತರಿ?

| Published : Jun 21 2024, 01:02 AM IST

ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಅನುದಾನಕ್ಕೆ ಕತ್ತರಿ?
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರಿನ ಶಾಸಕರಾಗಿದ್ದ ಈ.ತುಕಾರಾಂ, ಜಿಲ್ಲೆಗೆ ಡಿಎಂಎಫ್‌ ಅನುದಾನ ಒದಗಿಸಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಸಿಎಂ ಸಿದ್ದರಾಮಯ್ಯ ವಿಜಯನಗರ ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲೇ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌)ಯಡಿ ಜಿಲ್ಲೆಗೆ ದೊರೆಯುತ್ತಿರುವ ಅನುದಾನ ನಿಲ್ಲಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.

ಸಂಡೂರಿನ ಶಾಸಕರಾಗಿದ್ದ ಈ.ತುಕಾರಾಂ, ಜಿಲ್ಲೆಗೆ ಡಿಎಂಎಫ್‌ ಅನುದಾನ ಒದಗಿಸಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ, ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಡಿಎಂಎಫ್‌ ಅಧ್ಯಕ್ಷರಾದ ಜಿಲ್ಲಾಧಿಕಾರಿಗೆ ಪತ್ರ ಬರೆದು, ಇತ್ತೀಚೆಗೆ ಸಂಗ್ರಹವಾದ ನಿಧಿಯ ಅಂಕಿ-ಅಂಶದ ಮಾಹಿತಿ ಸಲ್ಲಿಸಲು 2024ರ ಮೇನಲ್ಲಿ ಪತ್ರ ಬರೆದು ಸೂಚಿಸಿದ್ದಾರೆ.

ಜಿಲ್ಲೆ 2021ರ ಫೆಬ್ರವರಿ 8ರಂದು ಅಸ್ತಿತ್ವಕ್ಕೆ ಬರುವ ಮುನ್ನ ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಳ್ಳಾರಿಯಿಂದ ವಿಜಯನಗರ ಜಿಲ್ಲೆ ಬೇರ್ಪಡುವ ಮುನ್ನ ಚರ್ಚೆ ನಡೆದಿತ್ತು. ಅದಿರು ಮಾರಾಟದ ರಾಜಧನದಲ್ಲಿ ಸಂಗ್ರಹವಾಗುವ ವಂತಿಕೆಯ ಸ್ವಲ್ಪ ಪ್ರಮಾಣ ಡಿಎಂಎಫ್‌ ನಿಧಿಗೆ ಹೋಗಲಿದೆ. ಈ ಅನುದಾನದಡಿ ಉಭಯ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳಿಗೆ ಅನುಕೂಲ ಆಗಲಿದೆ ಎಂದು ಆಗ ಸುದೀರ್ಘ ಚರ್ಚೆ ನಡೆದು ತಾತ್ವಿಕ ಒಪ್ಪಿಗೆಯೂ ನೀಡಲಾಗಿತ್ತು. ಆದರೆ, ಈಗ ಡಿಎಂಎಫ್‌ ಅನುದಾನ ಹಂಚಿಕೆ ಬಗ್ಗೆ ಆಗಿನ ಶಾಸಕ, ಈಗಿನ ಸಂಸದ ಈ.ತುಕಾರಾಂ ಬರೆದ ಪತ್ರದ ಆಧಾರದಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಈಗ ಕಾರ್ಯಪ್ರವೃತ್ತವಾಗಿದೆ.

ಉಭಯ ಜಿಲ್ಲೆಗಳಲ್ಲಿ 38 ಗಣಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ವಾರ್ಷಿಕ 35 ಮಿಲಿಯನ್ ಟನ್‌ ಅದಿರು ಉತ್ಪಾದನೆ ಮಾಡುತ್ತಿವೆ. ಈ ಅದಿರು ಮಾರಾಟದಿಂದ ದೊರೆಯುವ ರಾಯಲ್ಟಿಯಲ್ಲಿ ಉಭಯ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಜಿಲ್ಲೆಗೆ ಡಿಎಂಎಫ್‌ ಅನುದಾನ ಒದಗಿಸಿರುವುದರ ಕುರಿತು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಅಭಿವೃದ್ಧಿಗೆ ಭಾರೀ ಹೊಡೆತ:

ಒಂದು ವೇಳೆ ರಾಜ್ಯ ಸರ್ಕಾರ ಡಿಎಂಎಫ್‌ ಅನುದಾನವನ್ನು ಜಿಲ್ಲೆಗೆ ನೀಡುವುದನ್ನು ನಿಲ್ಲಿಸಿದರೆ, ಜಿಲ್ಲೆಯ ಆದಾಯಕ್ಕೆ ಪೆಟ್ಟು ಬೀಳಲಿದೆ. ಜಿಲ್ಲೆಯ ಅಭಿವೃದ್ಧಿಗೂ ಹೊಡೆತ ಬೀಳಲಿದೆ. ಜಿಲ್ಲೆಯಲ್ಲಿ ಡಿಎಂಎಫ್‌ ಅನುದಾನ ಬಳಕೆ ಮಾಡಿಕೊಂಡು ಶಾಲಾ ಕಟ್ಟಡ, ಸರ್ಕಾರಿ ಕಟ್ಟಡ, ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಈ ಹಿಂದೆ ಕೈಗೊಳ್ಳಲಾಗಿದೆ. ಜಿಲ್ಲೆಗೆ ಕೆಕೆಆರ್‌ಡಿಬಿ, ಸರ್ಕಾರದ ಅನುದಾನ ದೊರೆಯದಿದ್ದರೂ ಈ ಅನುದಾನದಿಂದಲೇ ಜಿಲ್ಲೆಯಲ್ಲಿ ತಕ್ಕಮಟ್ಟಿನ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಈ ಅನುದಾನ ನಿಂತರೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕುಂಠಿತವಾಗಲಿದೆ. ಈ ಬಗ್ಗೆ ಜಿಲ್ಲೆಯ ಐದು ಕ್ಷೇತ್ರಗಳ ಶಾಸಕರು ಕೂಡ ಧ್ವನಿ ಎತ್ತಬೇಕು ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.

ಸಂಡೂರು ಶಾಸಕರು ಆಗಿದ್ದ ಈ.ತುಕಾರಾಂ ವಿಜಯನಗರ ಜಿಲ್ಲೆಗೆ ಡಿಎಂಎಫ್‌ ಅನುದಾನ ಹಂಚಿಕೆ ಮಾಡಿರುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಸರ್ಕಾರ ಈಗ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಅನುದಾನ ಜಿಲ್ಲೆಗೆ ದೊರೆಯದಿದ್ದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ. ಸಿಎಂ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು ಎನ್ನುತ್ತಾರೆ ಮಾಜಿ ಸಚಿವ ಆನಂದ ಸಿಂಗ್.