ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಜಯನಗರ ಕೆಡಿಪಿ ಸಭೆ

| Published : Jun 21 2024, 01:08 AM IST

ಸಾರಾಂಶ

ಬೆಳಿಗ್ಗೆ 10 ಗಂಟೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್‌ನಿಂದ ನಿರ್ಗಮಿಸಿ ರಸ್ತೆಯ ಮೂಲಕ ಬೆಳಗ್ಗೆ 10.25ಕ್ಕೆ ಹೊಸಪೇಟೆಗೆ ಆಗಮಿಸುವರು.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ.21ರಂದು ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಲ್ಲಿರುವ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಜೂ.21ರಂದು ವಿಜಯನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್‌ನಿಂದ ನಿರ್ಗಮಿಸಿ ರಸ್ತೆಯ ಮೂಲಕ ಬೆಳಗ್ಗೆ 10.25ಕ್ಕೆ ಹೊಸಪೇಟೆಗೆ ಆಗಮಿಸುವರು. ಬಳಿಕ ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‌ನಲ್ಲಿ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಂಜೆ 4 ಗಂಟೆಗೆ ಹೊಸಪೇಟೆಯಿಂದ ನಿರ್ಗಮಿಸಿ ಬಳಿಕ ಜಿಂದಾಲ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕೆಡಿಪಿ ಸಭೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಶಾಸಕರಾದ ಎಚ್.ಆರ್‌. ಗವಿಯಪ್ಪ, ಕೆ.ನೇಮರಾಜ್‌ ನಾಯ್ಕ, ಎಂ.ಪಿ. ಲತಾ, ಡಾ. ಎನ್‌.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌, ಎಸ್ಪಿ ಶ್ರೀಹರಿಬಾಬು, ಜಿಪಂ ಸಿಇಒ ಸದಾಶಿವಪ್ರಭು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿರ್ದೇಶನ:

ವಿಶಿಷ್ಟವಾದ ಐತಿಹಾಸಿಕ ಪರಂಪರೆಯನ್ನು ಹೊಂದಿದ ವಿಜಯನಗರ ಸಾಮ್ರಾಜ್ಯದ ನೆಲೆವೀಡಾದ ವಿಜಯನಗರ ಜಿಲ್ಲೆಯು ಹೊಸದಾಗಿ ರಚನೆಗೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎನ್ನುವ ಸಂದೇಶ ರವಾನೆಯಾಗಬೇಕು. ಈ ದಿಸೆಯಲ್ಲಿ ನಾವೆಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದನ್ನು ತಿಳಿಸುವ ಹಾಗೆ ಸಭೆಯು ವೈಶಿಷ್ಟ್ಯಪೂರ್ಣವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಭೆಯ ಘನತೆಯನ್ನು ಹೆಚ್ಚಿಸುವ ಹಾಗೆ ಪೂರ್ಣ ಮಾಹಿತಿಯೊಂದಿಗೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‌ನಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಇನ್ನು ಅನೇಕ ಇಲಾಖೆಗಳಲ್ಲಿನ ಹುದ್ದೆಗಳು ಭರ್ತಿಯಾಗಬೇಕು. ಹೊಸದಾಗಿ ಕೆಲವು ಹುದ್ದೆಗಳು ಸೃಜನೆಯಾಗಬೇಕು. ಈ ನಿಟ್ಟಿನಲ್ಲಿ ಡಿಪಿಆರ್‌ಗೆ ಪತ್ರ ಬರೆದು ಕ್ರಮ ವಹಿಸಲಾಗುತ್ತಿದೆ. ಆಯಾ ಇಲಾಖೆಗಳ ಅಧಿಕಾರಿಗಳು ತಮ್ಮ ಹಂತದಲ್ಲಿ ನಿರಂತರ ಪ್ರಯತ್ನ ನಡೆಸಬೇಕು. ಇಂತಹ ಹಲವಾರು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿದ್ದು ಅಧಿಕಾರಿಗಳು ಪೂರಕವಾದ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಲಭ್ಯತೆ, ಮೇವಿನ ಪೂರೈಕೆ ಸೇರಿದಂತೆ ಮಹತ್ವದ ಮಾಹಿತಿಯೊಂದಿಗೆ ಮುಖ್ಯವಾಗಿ ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಈ ಭಾಗದ ಜನರ ಜೀವನಾಡಿ ತುಂಗಭದ್ರಾ ಡ್ಯಾಮ್‌ನಲ್ಲಿನ ನೀರಿನ ಲಭ್ಯತೆ, ಕುಡಿಯುವ ನೀರಿನ ಸರಬರಾಜು, ನೀರಾವರಿ ಯೋಜನೆಗಳ ಪ್ರಗತಿಯ ಚರ್ಚೆಗೆ ಬೇರೆ, ಬೇರೆ ಇಲಾಖೆಗಳ ಅಧಿಕಾರಿಗಳು ನೀಡುವ ಮಾಹಿತಿ ಪೂರಕವಾಗಿರಬೇಕು ಎಂದು ತಿಳಿಸಿದರು.

ಮಳೆಯಿಂದಾಗಿ ಜೀವಹಾನಿ, ಜಾನುವಾರು ಪ್ರಾಣ ಹಾನಿ ಪ್ರಕರಣಗಳಿಗೆ ಪರಿಹಾರ, ವಸತಿ ಹಾನಿಗೆ ಪರಿಹಾರ ನೀಡಿಕೆ ಸೇರಿದಂತೆ ಮಹತ್ವದ ವಿವಿಧ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರಾತ್ಯಕ್ಷಿಕೆಯ ಮೂಲಕ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ ಜೆ.ಎಂ. ಮತ್ತಿತರರಿದ್ದರು.