ತಾಲೂಕಿನ ವೈ.ಎನ್‌.ಹೊಸಕೋಟೆ ಹೋಬಳಿ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕೃಷ್ಣದೇವರಾಯರ ಕಾಲಕ್ಕೆ ಸಂಬಂಧಿಸಿ ಎರಡು ಶಿಲಾ ಶಾಸನಗಳನ್ನು ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಪತ್ತೆಹಚ್ಚಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ

ತಾಲೂಕಿನ ವೈ.ಎನ್‌.ಹೊಸಕೋಟೆ ಹೋಬಳಿ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ದೊಡ್ಡೇನಹಳ್ಳಿ ಗ್ರಾಮದಲ್ಲಿ ಕೃಷ್ಣದೇವರಾಯರ ಕಾಲಕ್ಕೆ ಸಂಬಂಧಿಸಿ ಎರಡು ಶಿಲಾ ಶಾಸನಗಳನ್ನು ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಪತ್ತೆಹಚ್ಚಿದ್ದಾರೆ. ದೊಡ್ಡೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೊರವಲಯದಲ್ಲಿರುವ ತಿರುಮಲ ದೇವರ ಗಡ್ಡೆ ಎಂಬ ದಿಬ್ಬದ ಬಳಿ ಬಹುತೇಕ ಭೂಮಿಯಲ್ಲಿ ಹೂತು ಹೋಗಿದ್ದ ಎರಡು ಕಲ್ಲುಗಳನ್ನು ಹೊರ ತೆಗೆದು ಪರೀಕ್ಷಿಸಿದ್ದಾರೆ. ಅವು ಕೃಷ್ಣದೇವರಾಯನ ಕಾಲದ ಶಾಸನಗಳೆಂದು ಗುರ್ತಿಸಲಾಗಿದೆ. ಇಲ್ಲಿನ ಜಮೀನಿನ ಮಾಲೀಕರಾದ ಗುರಿಕಾರ ಆರ್.ಎಲ್.ನರಸಿಂಹಯ್ಯ ಮತ್ತು ನಿವೃತ್ತ ಸಾರಿಗೆ ಇಲಾಖೆಯ ಅಧಿಕಾರಿ ಬಿ.ತಿಪ್ಪೇಸ್ವಾಮಿಯವರ ಸಹಕಾರದಿಂದ ಶಾಸನ ಕಲ್ಲುಗಳನ್ನು ಮೇಲೆತ್ತಿ ಸಂರಕ್ಷಿಸಲಾಗಿದ್ದು,ಮತ್ತೋರ್ವ ಸಂಶೋಧಕರಾದ ಗುರುವೇಪಲ್ಲಿ ನರಸಿಂಹುಲು ಸಹಕಾರದೊಂದಿಗೆ ಶಾಸನವನ್ನು ಓದುವ ಪ್ರಯತ್ನ ಮಾಡಲಾಗಿದೆ.

ಶಾಸನ ಎರಡು ಕಲ್ಲುಗಳ ಮೇಲೆ ಒಂದೊಂದು ಬದಿಯಲ್ಲಿ ಬರೆಯಲಾಗಿದ್ದು, ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯ ಶಾಸನವಾಗಿದೆ. 1ನೇ ಕಲ್ಲಿನಲ್ಲಿ 26 ಸಾಲುಗಳು ಮತ್ತೊಂದು ಕಲ್ಲಿನಲ್ಲಿ 21 ಸಾಲುಗಳು ಸೇರಿ ಒಟ್ಟು 47 ಸಾಲು ಬರಹವಿದೆ. ಮೊದಲ ಗ್ರಾನೈಟ್ ಬಂಡೆಯು 4 ಅಡಿ ಎತ್ತರ ಮತ್ತು 2.25 ಅಡಿ ಅಗಲವನ್ನು ಹೊಂದಿದ್ದು, ಮೇಲ್ಭಾಗ ತ್ರಿಕೋನಾಕಾರವಾಗಿದೆ. ಎರಡನೆಯದು 3.5 ಅಡಿ ಅಗಲವಿದ್ದು, ಮೇಲೆ ಮತ್ತು ಕೆಳಗೆ ತ್ರಿಕೋನಾಕಾರವಾಗಿದೆ. ಎರಡು ಕಲ್ಲುಗಳ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಮತ್ತು ನಾಮಗಳನ್ನು ಬಿಡಿಸಲಾಗಿದೆ. ಶಾಸನದ ಕಾಲವನ್ನು ಶಾಲಿವಾಹನ ಶಕ 1437ನೇ ಯುವನಾಮ ಸಂವತ್ಸರದ ಭಾದ್ರಪದ ಶು.11ರ ಶುಕ್ರವಾರ ಎಂದು ತಿಳಿಸುತ್ತಾ ಪಾಠಾಂಶ ಮುಂದುವರೆದು, ಅಂತ್ಯದಲ್ಲಿ ಶಾಸನ ಕೆಡಿಸಿದವರಿಗೆ ವಾರಣಾಸಿಯಲ್ಲಿ ಗೋಹತ್ಯೆ ಮತ್ತು ಮಾತಾಪಿತೃ ಹತ್ಯೆಯ ಪಾಪಕ್ಕೆ ಗುರಿಯಾಗುವರು ಎಂಬ ವಿಷಯದಿಂದ ಕೊನೆಗೊಳ್ಳುತ್ತದೆ ಎಂದು ಸಂಶೋಧಕ ಹೊ.ಮ.ನಾಗರಾಜು ತಿಳಿಸಿದ್ದಾರೆ. ಶಾಸನದ ಬಗ್ಗೆ ಮಾಹಿತಿ ನೀಡಿದ ಗುರುವೇಪಲ್ಲಿ ನರಸಿಂಹುಲು, ಶ್ರೀಕೃಷ್ಣದೇವರಾಯರು ವಿಜಯನಗರವನ್ನು ಆಳುತ್ತಿದ್ದ ಆ ಸಂದರ್ಭದಲ್ಲಿ ನಿಡುಗಲ್ಲಿನಲ್ಲಿ ಜಕ್ಕರಾಯ ಆಳ್ವಿಕೆ ಮಾಡುತ್ತಿದ್ದರು. ಅವರ ಕಾಲಕ್ಕೆ ಶಾಸನ ಸಂಬಂಧಿಸಿದ್ದು, ಇದೊಂದು ದಾನ ಶಾಸನವಾಗಿದೆ. ಶಾಸನದ ಕೆಲವು ಅಕ್ಷರಗಳು ತೃಟಿತವಾಗಿರುವುದರಿಂದ ಶಾಸನದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರೆದಿದೆ ಎಂದಿದ್ದಾರೆ. ಇಲ್ಲಿರುವ ತಿರುಮಲ ದೇವರ ಗಡ್ಡೆ ಎಂದು ಕರೆಯುವ ದಿಬ್ಬವು ಈ ಹಿಂದೆ ಇದ್ದ ದೇವಾಲಯದ ಅವಶೇಷವಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯದ ಅವಶೇಷಗಳಾಗಿ ಕಲ್ಲುಕಂಬಗಳು, ಬಾಗಿಲುವಾಡಗಳು, ಭೋದಿಗೆಗಳು, ಮೂಲ ದೇವರ ಪಾಣಿಪೀಠ, ದೇವಾಲಯದ ತಳಪಾಯ, ಚಿಕ್ಕ ವೀರಮಾಸ್ತಿಗಲ್ಲು ಇತ್ಯಾದಿಗಳನ್ನು ಗುರ್ತಿಸಲಾಗಿದೆ. ಇವು ಗಿಡಗಂಟೆ ಮತ್ತು ಮಣ್ಣಿನಿಂದ ಆವೃತವಾಗಿ ದಿಬ್ಬವಾಗಿ ಪರಿವರ್ತನೆ ಹೊಂದಿದೆ. ಈ ದೇವಾಲಯದ ಮುಂಭಾಗದಲ್ಲಿ ಅರವಟ್ಟಿಗೆ ಕಲ್ಲುಗಳ ಅವಶೇಷಗಳು ಇರುವುದನ್ನು ಮುಖಂಡರಾದ ಬಿ.ಶಿವಪ್ಪ, ವಾಟರಮೆನ್ ನಾಗರಾಜು ತೋರಿಸಿ ಮಾಹಿತಿ ನೀಡಿದ್ದಾರೆ.

ಈ ವೇಳೆ ಗ್ರಾಮದ ಮುಖಂಡರಾದ ರಾಜೇಶ,ಶ್ರೀನಿವಾಸ ಹಾಗೂ ನರಸಿಂಹಪ್ಪ ಇತರರು ಇದ್ದರು.