ವಿಜಯನಾರಾಯಣಸ್ವಾಮಿ ರಥೋತ್ಸವ ಸಂಪನ್ನ

| Published : Feb 06 2025, 12:15 AM IST

ಸಾರಾಂಶ

ಗುಂಡ್ಲುಪೇಟೆ ಪಟ್ಟಣದಲ್ಲಿ ವಿಜಯನಾರಾಯಣಸ್ವಾಮಿ ರಥೋತ್ಸವ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಥಸಪ್ತಮಿಯ ದಿನವಾದ ಬುಧವಾರ ಪಟ್ಟಣದ ಪ್ರಸಿದ್ಧ ವಿಜಯನಾರಾಯಣಸ್ವಾಮಿ ರಥೋತ್ಸವ ಸಂಭ್ರಮದಲ್ಲಿ ಜರುಗಿತು.

ಪಟ್ಟಣದ ವಿಜಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಶುಕ್ರವಾರ ಮಧ್ಯಾಹ್ನ ೧೨ಗಂಟೆ ವೇಳೆಗೆ ವಿಜಯನಾರಾಯಣಸ್ವಾಮಿ ವಿಗ್ರಹ ಹೊತ್ತು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಗೋವಿಂದನ ನಾಮಸ್ಮರಣೆಯೊಂದಿಗೆ ಮೆರವಣಿಗೆ ಮತ್ತೆ ದೇವಸ್ಥಾನದ ಬಳಿಯಿದ್ದ ತೇರಿಗೆ ದೇವರನ್ನು ೧೨.೩೦ರ ಬಳಿಕ ಕೂರಿಸಲಾಯಿತು. ತಹಸಿಲ್ದಾರ್ ಟಿ.ರಮೇಶ್‌ ಬಾಬು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದ ಸುತ್ತ ಒಂದು ಪ್ರದಕ್ಷಿಣೆ ಹಾಕಲಾಯಿತು. ರಥ ಎಳೆಯಲು ಶುರುವಾದಂತೆ ಭಕ್ತರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಬಡಾವಣೆಯಲ್ಲಿ ಮನೆಯ ಮುಂದೆ ಕೆಲ ಹರಕೆ ಹೊತ್ತವರು ಕಲ್ಲು ಸಕ್ಕರೆ, ಪಾನಕ ನೀಡಿದರು.

ಶಾಸಕ ಗಣೇಶ್‌ ಪ್ರಸಾದ್‌ ಭೇಟಿ:

ವಿಜಯನಾರಾಯಣಸ್ವಾಮಿ ರಥೋತ್ಸವ ಹಿನ್ನೆಲೆ ದೇವಸ್ಥಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಪಟ್ಟಣದ ಪ್ರಮುಖರಾದ ಎಸ್.ಗೋವಿಂದರಾಜನ್, ಪಂಜನಹಳ್ಳಿ ವಸಂತಪ್ಪ, ಮಂಜುನಾಥ್ (ಶಾಸಕರ ಸಹಾಯಕ), ನಾಗೇಶ್, ಸತೀಶ್, ಅಶ್ವಿನ್‌, ಬೇಕರಿಅರುಣ್, ಅರ್ಚಕ ರಾಘವೇಂದ್ರ ಅಯ್ಯಂಗಾರ್‌, ವರದರಾಜ ಅಯ್ಯಂಗಾರ್‌, ಪುರಸಭೆ ಸದಸ್ಯರು ಹಾಗೂ ಪಟ್ಟಣದ ನೂರಾರು ಮಹಿಳೆಯರು, ಭಕ್ತರು ಭಾಗವಹಿಸಿದ್ದರು.