ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವ ತಯಾರಿ ಕುರಿತು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಬಗ್ಗೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಠರಾವು ಪಾಸು ಮಾಡಿದ ಪ್ರತಿ ಓದಿದರು.ನೂತನ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯಲ್ಲಿ ಎಂಟು ಮತಕ್ಷೇತ್ರಗಳಿದ್ದು, 9 ಮಂಡಲಗಳಿವೆ. ಇವುಗಳಲ್ಲಿ ನಿನ್ನೆವರೆಗೆ ವಿಜಯಪುರ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಹಾಗೂ ಸಿದ್ದು ಎನ್ನುವವರು ಮಾತ್ರ ರಾಜೀನಾಮೆ ಕೊಟ್ಟಿದ್ದು, ನನಗೆ ಇಬ್ಬರದ್ದೇ ಅಧಿಕೃತ ರಾಜೀನಾಮೆ ಪತ್ರ ಬಂದಿವೆ. ಇಂದು ಒಂದೇ ಪ್ರತಿಯಲ್ಲಿ ವಿವಿಧ ಪದಾಧಿಕಾರಿಗಳು ಸಹಿ ಮಾಡಿರುವ ಎಂಟತ್ತು ಜನರ ರಾಜೀನಾಮೆ ಅರ್ಜಿ ಬಂದಿದೆ. ಅವುಗಳನ್ನು ಪರಿಶೀಲಿಸಿ ಪದಾಧಿಕಾರಿಗಳೇ ರಾಜೀನಾಮೆ ನೀಡಿದ್ದಾರಾ ಎಂದು ಖಚಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಯತ್ನಾಳ ಉಚ್ಛಾಟನೆಯಿಂದ ಹಲವು ಗೊಂದಲ ಮೂಡುತ್ತಿವೆ. ಇವುಗಳಿಗೆಲ್ಲ ತೆರೆ ಎಳೆಯಲೆಂದು ಜಿಲ್ಲೆಯಲ್ಲಿ ಶೀಘ್ರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಚಾರವನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು, ಸಮಾವೇಶ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಫೋಟೋಗಳಿಗೆ ಅವಮಾನ ಮಾಡಿದ್ದನ್ನು ಖಂಡಿಸುವುದಾಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ವಿಜಯ ಜೋಶಿ ಉಪಸ್ಥಿತರಿದ್ದರು.ಚಿತ್ರ: 28BIJ01
ಬರಹ: ಬಿಜೆಪಿ ಕೋರ್ ಕಮೀಟಿ ಸುದ್ದಿಗೋಷ್ಠಿಬಾಕ್ಸ್ಕೋರ್ ಕಮಿಟಿ ಹೊರಡಿಸಿದ ಠರಾವುದಿ.26.03.2025 ಬುಧವಾರ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಶಿಸ್ತು ಸಮಿತಿಯು ಬಸನಗೌಡ ಪಾಟೀಲ ಯತ್ನಾಳ ಶಾಸಕರು ವಿಜಯಪುರ ನಗರ, ಕರ್ನಾಟಕ. ಇವರನ್ನು ಮುಂದಿನ 6 ವರ್ಷಗಳ ವರೆಗೆ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆಗೊಳಿಸಿ ಆದೇಶಿಸಿರುತ್ತಾರೆ. ಈ ಆದೇಶವನ್ನು ಭಾರತೀಯ ಜನತಾ ಪಾರ್ಟಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಓಂ ಪಾಠಕರವರು ಈ ಅಧಿಕೃತ ಆದೇಶವನ್ನು ಹೊರಡಿಸಿರುತ್ತಾರೆ.ಈ ಅಧಿಕೃತ ಉಚ್ಚಾಟನೆ ಆದೇಶ ಪತ್ರವನ್ನು ಜಿಲ್ಲೆಯ ಕೋರ್ ಕಮಿಟಿ ಸಭೆಯಲ್ಲಿ ಗೌರವಾನ್ವಿತ ಜಿಲ್ಲಾ ಅಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿರವರು ಮಂಡಿಸಿದರು. ಭಾರತೀಯ ಜನತಾ ಪಾರ್ಟಿಯ ಕೇಂದ್ರ ಶಿಸ್ತು ಸಮಿತಿಯು ಬಸನಗೌಡ ಪಾಟೀಲ ಯತ್ನಾಳ ಇವರನ್ನು ಮುಂದಿನ 06 ವರ್ಷಗಳ ವರೆಗೆ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಹಾಗೂ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ದೇಶಿಸಿದ ವಿಷಯವನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು. ಭಾರತೀಯ ಜನತಾ ಪಾರ್ಟಿಯ ಕೇಂದ್ರ ಶಿಸ್ತು ಸಮಿತಿ ಹೊರಡಿಸಿದ ಆದೇಶವನ್ನು ಭಾ.ಜ.ಪಾ ವಿಜಯಪುರ ಜಿಲ್ಲೆಯ ಕೋರ್ ಕಮಿಟಿಯಲ್ಲಿ ಸರ್ವಾನುಮತದಿಂದ ಬೆಂಬಲಿಸಿ ಅಂಗೀಕರಿಸಲಾಯಿತು.