ಸಾರಾಂಶ
ಬೆಂಗಳೂರು : ವಕ್ಫ್ ಆಸ್ತಿ ಕುರಿತಂತೆ ಪಕ್ಷದ ಅತೃಪ್ತ ನಾಯಕರು ಜನಜಾಗೃತಿ ಅಭಿಯಾನ ನಡೆಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೈಜ ವರದಿ ಸಂಗ್ರಹಿಸುವ ಸಂಬಂಧ ಮೂರು ತಂಡಗಳನ್ನು ರಚಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಅತೃಪ್ತ ನಾಯಕರು ಸಭೆ ಸೇರಿ ಈ ತಿಂಗಳ 25ರಿಂದ ಒಂದು ತಿಂಗಳ ಕಾಲ ವಕ್ಫ್ ಆಸ್ತಿ ಕುರಿತು ಜನಜಾಗೃತಿ ಅಭಿಯಾನ ನಡೆಸುವ ತೀರ್ಮಾನ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ವಿಜಯೇಂದ್ರ ಅವರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತಂಡಗಳನ್ನು ರಚಿಸುವ ನಿರ್ಧಾರ ಪ್ರಕಟಿಸಿದರು.
ಬಳಿಕ ಸಂಜೆ ಹೊತ್ತಿಗೆ ತಂಡಗಳನ್ನು ರಚಿಸಿ ಪ್ರಕಟಣೆ ನೀಡಿದರು.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಲ್ಲಿ ಅತೃಪ್ತ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಅವರಿಗೂ ಸ್ಥಾನ ನೀಡಲಾಗಿದೆ.
ಇತ್ತೀಚೆಗೆ ರಾಜ್ಯಾದ್ಯಂತ ರೈತರು ಹಾಗೂ ಮಠಗಳ ಪಹಣಿಗಳಲ್ಲಿ ಸರ್ಕಾರದಿಂದ ವಕ್ಫ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿ ಸಂಗ್ರಹಿಸಲು ‘ನಮ್ಮ ಭೂಮಿ-ನಮ್ಮ ಹಕ್ಕು’ ಎಂಬ ಘೋಷವಾಕ್ಯದಡಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಸೂಚಿಸಿರುವ ಆಯಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ವಿಸ್ತೃತ ವರದಿಯನ್ನು ಸಂಗ್ರಹಿಸಲಿವೆ ಎಂದು ವಿಜಯೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ಹಂತದಲ್ಲಿ ಹೋರಾಟ:
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿ ಹಿರಿಯರ ಜೊತೆ ಚರ್ಚೆ ನಡೆಸಿದ್ದು ಎರಡು ಹಂತದಲ್ಲಿ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಅದರ ಪ್ರಕಾರ ಮೂರು ತಂಡಗಳನ್ನು ರಚನೆ ಮಾಡಿದ್ದೇವೆ. ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಅಯೋಗ್ಯತನವನ್ನು ಪ್ರದರ್ಶಿಸುತ್ತಿದೆ.
ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರಾಜ್ಯದ ರೈತರು ಆತಂಕದಲ್ಲಿದ್ದಾರೆ. ಮಠಮಾನ್ಯಗಳ ಜಮೀನು, ದೇವಸ್ಥಾನಗಳ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಸ್ಪಷ್ಟ ಉತ್ತರ ಕೊಡುವವರೆಗೆ, ಎಲ್ಲಿವರೆಗೆ ರೈತರಿಗೆ ನಿರಾಳತೆ ಸಿಗುವುದಿಲ್ಲವೋ ಅಲ್ಲಿವರೆಗೆ ದೃಢವಾಗಿ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.