ಸಾರಾಂಶ
ಉಪ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿಯೇ ವಿಜಯೇಂದ್ರ ಅವರು ಶ್ರೀರಾಮುಲು ಮನೆಗೆ ತೆರಳಿ ಮಾತುಕತೆ ನಡೆಸಿದರು
ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿ, ಕೆಲ ಹೊತ್ತು ಸಂಡೂರು ಉಪ ಚುನಾವಣೆ ಕುರಿತು ಚರ್ಚಿಸಿದರು.
ಸಿರುಗುಪ್ಪದಲ್ಲಿ ಹಮ್ಮಿಕೊಂಡಿರುವ ಶ್ರೀಶೈಲ ಜಗದ್ಗುರುಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಜಯೇಂದ್ರ ಅವರು ನಗರದ ಹವಾಂಭಾವಿ ಪ್ರದೇಶದಲ್ಲಿರುವ ಶ್ರೀರಾಮುಲು ನಿವಾಸಕ್ಕೆ ತೆರಳಿ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲದೆ, ಬಳಿಕ ಉಪಹಾರ ಸೇವಿಸಿ ಸಿರುಗುಪ್ಪ ಕಡೆ ತೆರಳಿದರು.ಉಪ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿಯೇ ವಿಜಯೇಂದ್ರ ಅವರು ಶ್ರೀರಾಮುಲು ಮನೆಗೆ ತೆರಳಿ ಮಾತುಕತೆ ನಡೆಸಿದರು ಎಂದು ಹೇಳಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವ ಸ್ಥಳದಲ್ಲಿದ್ದ ಪಕ್ಷದ ಮುಖಂಡರು, ಸಿರುಗುಪ್ಪದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಜಯೇಂದ್ರ ಆಗಮಿಸಿದ್ದರು.
ಶುಕ್ರವಾರ ಬಿಜೆಪಿ ಅಭ್ಯರ್ಥಿ ಸಂಡೂರಿನಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ವಿಜಯೇಂದ್ರ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬಂದಿದ್ದರು. ಶ್ರೀರಾಮುಲು ಮನೆಗೆ ಆಹ್ವಾನಿಸಿದ್ದರು. ಅಂತೆಯೇ ಮನೆಗೆ ತೆರಳಿ ಉಪಹಾರ ಸೇವಿಸಿ ಶ್ರೀಶೈಲ ಜಗದ್ಗುರು ಒತ್ತಾಸೆಯಂತೆ ಸಿರುಗುಪ್ಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿದರು.ಶುಕ್ರವಾರ ಸಂಡೂರಿಗೆ ತೆರಳಿ ನಾಮಪತ್ರ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ್ತೆ ಶಿವಮೊಗ್ಗದ ಕಡೆ ವಿಜಯೇಂದ್ರ ತೆರಳಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮಲ್ಲನಗೌಡ ಇತರರಿದ್ದರು.
ಬಳ್ಳಾರಿಯ ಶ್ರೀರಾಮುಲು ನಿವಾಸದಲ್ಲಿ ಜರುಗಿದ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗವಹಿಸಿದ್ದರು.